ಅತ್ಯಾಚಾರ ಸಂತ್ರಸ್ತರ ಗರ್ಭಪಾತ ಕಾನೂನು ತಿದ್ದುಪಡಿಗೆ ಪರಿಗಣಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಗರ್ಭಪಾತದ ವಿಷಯದಲ್ಲಿ ಕಾನೂನು ಬದಲಾಗಬೇಕು ಮತ್ತು ಅಲ್ಲಿ ಗರ್ಭಧಾರಣೆಯ ಅವಧಿಯ ನಿರ್ಬಂಧಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸಮಾಜದ ಬದಲಾವಣೆಗೆ ತಕ್ಕಂತೆ ಕಾನೂನುಗಳು ರೂಪಾಂತರಗೊಳ್ಳಬೇಕು ಮತ್ತು ಸಂತ್ರಸ್ತೆಯರ ಘನತೆ ಹಾಗೂ ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
15 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿಯೊಬ್ಬಳ 30 ವಾರಗಳಿಗೂ ಮೀರಿದ ಗರ್ಭಧಾರಣೆಯನ್ನು ತೆಗೆದುಹಾಕಲು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ದೆಹಲಿಯ ಏಮ್ಸ್ (AIIMS) ಆಸ್ಪತ್ರೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಮತ್ತು ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ಮಹತ್ವದ ಅವಲೋಕನಗಳನ್ನು ಮಾಡಿದೆ.

“ಅತ್ಯಾಚಾರದಿಂದ ಗರ್ಭಧಾರಣೆಯಾದ ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಯಾವುದೇ ಕಾಲಮಿತಿಯ ನಿರ್ಬಂಧ ಇರದಂತೆ ಕಾನೂನಿಗೆ ತಿದ್ದುಪಡಿ ತನ್ನಿ. ಕಾನೂನು ಸಮಯಕ್ಕೆ ತಕ್ಕಂತೆ ವಿಕಸನಗೊಳ್ಳಬೇಕು,” ಎಂದು ಸಿಜೆಐ ಸೂರ್ಯ ಕಾಂತ ತಿಳಿಸಿದರು.
“ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಬೇಡದ ಗರ್ಭಧಾರಣೆಯನ್ನು ಹೇರಲು ಸಾಧ್ಯವಿಲ್ಲ. ಅವಳು ಈಗ ಓದಬೇಕಾದ ವಯಸ್ಸಿನವಳು, ಅಂತಹ ಬಾಲಕಿಯನ್ನು ತಾಯಿಯನ್ನಾಗಿ ಮಾಡುವುದು ಸರಿಯಲ್ಲ. ಇದು ಆಕೆಗೆ ಜೀವನಪರ್ಯಂತ ಮಾನಸಿಕ ಆಘಾತ ಮತ್ತು ಕಳಂಕವಾಗಿ ಉಳಿಯುತ್ತದೆ,” ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.ಭ್ರೂಣದ ರಕ್ಷಣೆಯ ಬಗ್ಗೆ ಅತಿಯಾದ ಗಮನಹರಿಸಿ, ಸಂಕಷ್ಟದಲ್ಲಿರುವ ತಾಯಿಯ ನೋವನ್ನು ಕಡೆಗಣಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಏಮ್ಸ್ (AIIMS) ಆಸ್ಪತ್ರೆ ಅರ್ಜಿಯಲ್ಲೇನಿತ್ತು..?
ಗರ್ಭಧಾರಣೆಯು 30 ವಾರಗಳಿಗೂ ಮೀರಿರುವುದರಿಂದ, ಈ ಹಂತದಲ್ಲಿ ಗರ್ಭಪಾತ ಮಾಡುವುದು ವೈದ್ಯಕೀಯವಾಗಿ ಅಪಾಯಕಾರಿ. ಇನ್ನು ನಾಲ್ಕು ವಾರಗಳ ಕಾಲ ಕಾಯ್ದರೆ ಮಗು ಜೀವಂತವಾಗಿ ಮತ್ತು ಆರೋಗ್ಯವಾಗಿ ಜನಿಸುತ್ತದೆ, ನಂತರ ಅದನ್ನು ದತ್ತು ನೀಡಬಹುದು ಎಂದು ಏಮ್ಸ್ ವಾದಿಸಿತ್ತು. ಅಲ್ಲದೆ, ತಡವಾದ ಗರ್ಭಪಾತವು ಬಾಲಕಿಯ ಮುಂದಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.
“ವೈದ್ಯಕೀಯ ಅಪಾಯಗಳ ಬಗ್ಗೆ ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿ. ಆದರೆ ಅಂತಿಮ ನಿರ್ಧಾರವನ್ನು ಅವರಿಗೆ ಬಿಡಿ ಎಂದು ಅವರು ಹೇಳಿದರು.
ಪ್ರಸ್ತುತ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಕಾಯ್ದೆಯಡಿ ಗರ್ಭಪಾತಕ್ಕೆ ಸಾಮಾನ್ಯವಾಗಿ 24 ವಾರಗಳ ಮಿತಿ ಇದೆ. ಆದರೆ ಅತ್ಯಾಚಾರದಂತಹ ಘೋರ ಪ್ರಕರಣಗಳಲ್ಲಿ ಈ ಕಾಲಮಿತಿ ಸಂತ್ರಸ್ತೆಯರಿಗೆ ಅನ್ಯಾಯವಾಗಬಹುದು ಎಂಬುದು ಸುಪ್ರೀಂ ಕೋರ್ಟ್‌ನ ನಿಲುವಾಗಿದೆ. ಈ ಮೂಲಕ ಸಂತ್ರಸ್ತೆಯರ ಹಕ್ಕು ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶಾಸಕಾಂಗವು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement