ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಶುಕ್ರವಾರ ಬೆಳಗ್ಗೆ ಜರ್ಮನಿಯಿಂದ ವಾಪಸ್ಸಾಗುವಾಗ ಬೆಂಗಳೂರು ವಿಮಾನ ನಿಲ್ದಾಣದಿಂದ ಬಂಧಿಸಲಾಗಿದ್ದು, ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ಜೂನ್ 6ರವರೆಗೆ ಎಸ್ಐಟಿ ಕಸ್ಟಡಿಗೆ ಕಸ್ಟಡಿಗೆ ನೀಡಿದೆ.
ಬಂಧಿತ ಪ್ರಜ್ವಲ್ ಅವರನ್ನು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ವಿಶೇಷ ಮ್ಯಾಜಿಸ್ಟ್ರೇಟ್ ಕೆ.ಎನ್. ಶಿವಕುಮಾರ ಅವರ ಮುಂದೆ ಎಸ್ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಮೊದಲಿಗೆ ಪೀಠವು ಪ್ರಜ್ವಲ್ ಅವರಿಂದ ಬಂಧನ ಮತ್ತಿತರ ಮಾಹಿತಿ ಪಡೆಯಿತು.
ನಂತರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ನಾಯ್ಕ ಅವರು “ಪ್ರಜ್ವಲ್ ಕಾನೂನು ರೂಪಿಸುವ ಸ್ಥಾನದಲ್ಲಿದ್ದಾರೆ. ನೂರಾರು ಮಹಿಳೆಯರು ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ, ಹೆಚ್ಚಿನ ತನಿಖೆಗಾಗಿ ಅವರನ್ನು 15 ದಿನಗಳ ಎಸ್ಐಟಿ ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.
ಇದಕ್ಕೆ ಪ್ರಜ್ವಲ್ ಪರ ವಕೀಲ ಜಿ. ಅರುಣ ಅವರು ಆಕ್ಷೇಪಿಸಿದರು. “ಮೊದಲಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಲಾಗಿದೆ. ಈ ಮೂಲಕ ಜಾಮೀನು ರಹಿತ ಪ್ರಕರಣವನ್ನಾಗಿ ಮಾಡಲಾಗಿದೆ. ಸಿದ್ಧಪಡಿಸಿದ ದೂರನ್ನು ಸಂತ್ರಸ್ತೆಯಿಂದ ಪಡೆಯಲಾಗಿದೆ. ಸಂತ್ರಸ್ತೆಯ ವೀಡಿಯೊ ಹೇಳಿಕೆ ದಾಖಲಿಸಿಲ್ಲ. ಇದೆಲ್ಲದರ ನಡುವೆ ಪ್ರಜ್ವಲ್ ಎಲ್ಲಾ ರೀತಿಯಲ್ಲೂ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ” ಎಂದು ವಾದಿಸಿದರು.ವಾದ-ಪ್ರತಿವಾದ ಆಲಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಜ್ವಲ್ ಅವರನ್ನು ಜೂನ್ 6ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿದೆ.
ಶುಕ್ರವಾರ ಮಧ್ಯರಾತ್ರಿ 1:30ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ಅವರನ್ನು ವಶಕ್ಕೆ ಪಡೆದಿದ್ದರು. ನಂತರ ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಿ ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಅಗತ್ಯವಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿತ್ತು.
ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರು ಆಧರಿಸಿ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ 2ನೇ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ಗಳಾದ 354 (ಎ), 354 (ಡಿ), 376, 506, 505 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿದೆ.
ಇದಲ್ಲದೇ, ಬೆಂಗಳೂರಿನ ಸಿಐಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಗಳಾದ 376(2)(ಎನ್), 376(2)(ಕೆ), 506, 354ಎ(1)(ii), 354(ಬಿ), 354(ಸಿ) ಮತ್ತು ಐಟಿ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ