ನವದೆಹಲಿ: ಜೂನ್ 1 ರಂದು ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಕುರಿತ ಸುದ್ದಿ ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ.
ಲೋಕಸಭೆಯ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಪಾಲ್ಗೊಳ್ಳದಿರುವ ಪಕ್ಷದ ನಿರ್ಧಾರವನ್ನು ಕಾಂಗ್ರೆಸ್ ವಕ್ತಾರ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ ಖೇರಾ ಅವರು ಪ್ರಕಟಿಸಿದ್ದು, ಮತದಾರರು ಮತ ಚಲಾಯಿಸಿದ್ದಾರೆ ಮತ್ತು ಅವರ ತೀರ್ಪು ಸುರಕ್ಷಿತವಾಗಿದೆ, ಫಲಿತಾಂಶ ಜೂನ್ 4ರಂದು ಬರಲಿದೆ ಎಂದು ಹೇಳಿದ್ದಾರೆ.
“ಫಲಿತಾಂಶಗಳು ಜೂನ್ 4 ರಂದು ಹೊರಬೀಳುತ್ತವೆ. ಅದಕ್ಕೂ ಮೊದಲು, ಟಿಆರ್‌ಪಿಗಾಗಿ ಊಹಾಪೋಹ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ನಮಗೆ ಯಾವುದೇ ಕಾರಣವಿಲ್ಲ” ಎಂದು ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಕ್ಸಿಟ್ ಪೋಲ್‌ಗಳ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು. ನಾವು ಜೂನ್ 4 ರಿಂದ ಚರ್ಚೆಗಳಲ್ಲಿ ಸಂತೋಷದಿಂದ ಭಾಗವಹಿಸುತ್ತೇವೆ” ಎಂದು ಖೇರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಊಹಾಪೋಹದ ಅರ್ಥವೇನು? ಬೆಟ್ಟಿಂಗ್‌ನಲ್ಲಿ ಕೆಲವು ಶಕ್ತಿಗಳು ಭಾಗಿಯಾಗಿವೆ. ನಾವೇಕೆ ಅದರ ಭಾಗವಾಗಬೇಕು? ಯಾರಿಗೆ ಮತ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಜೂನ್ 4 ರಂದು ಪಕ್ಷಗಳು ಎಷ್ಟು ಮತಗಳನ್ನು ಪಡೆದಿವೆ ಎಂದು ತಿಳಿಯುತ್ತದೆ. ನಾವೇಕೆ ಊಹಿಸಬೇಕು? ಎಂದು ಪವನ್ ಖೇರಾ ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್‌ನ ಮಿತ್ರ ಪಕ್ಷ ಸಮಾಜವಾದಿ ಪಕ್ಷದ ಅಖಿಲೇಶ ಯಾದವ್ ಕೂಡ ತಮ್ಮ ಪಕ್ಷದ ಕಾರ್ಯಕರ್ತರಿಗೆ ಇದೇ ರೀತಿಯ ಸೂಚನೆ ನೀಡಿದ್ದಾರೆ. “ನೀವು ಯಾವುದೇ ಬಿಜೆಪಿ ‘ಎಕ್ಸಿಟ್ ಪೋಲ್’ಗಳಿಂದ ಪ್ರಭಾವಿತರಾಗಬೇಡಿ ಮತ್ತು ಸಂಪೂರ್ಣ ಜಾಗರೂಕರಾಗಿರಿ, ನಿಮ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಿ ಮತ್ತು ದೃಢವಾಗಿ ನಿಲ್ಲಿ ಮತ್ತು ನಮ್ಮ ವಿಜಯದ ಮೂಲ ಮಂತ್ರವಾದ ‘ಮತದಾನವೂ ಸಹ ಜಾಗರೂಕವಾಗಿದೆ’ ಎಂದು ನೆನಪಿಸಿಕೊಳ್ಳುವುದು ನಿಮಗೆಲ್ಲರಿಗೂ ವಿಶೇಷ ಮನವಿಯಾಗಿದೆ. ಗೆಲುವಿನ ಪ್ರಮಾಣಪತ್ರವನ್ನು ಪಡೆದ ನಂತರವೇ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದೇಶದ ಜನರ ಗೆಲುವನ್ನು ಸಂಬ್ರಮಾಚರಣೆ ಮಾಡಿ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದ್ವವ ಎಕ್ಸ್ ನಲ್ಲಿ ಬರೆದಿದ್ದಾರೆ.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಸುದ್ದಿ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಜೂನ್ 1 ರಂದು ಸಂಜೆ 6:30 ರ ನಂತರ ಎಕ್ಸಿಟ್ ಪೋಲ್ ಡೇಟಾವನ್ನು ಮತ್ತು ಅದರ ಫಲಿತಾಂಶಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ