ಬೆಂಗಳೂರಿನಲ್ಲಿ ವಿದ್ಯುತ್ ತಗುಲಿ ತಾಯಿ, ಮಗು ಸಾವಿನ ಪ್ರಕರಣ : ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್

ಬೆಂಗಳೂರು: ಕಾಡುಗೋಡಿಯ ಹೋಪ್‌ ಫಾರ್ಮ್ ಬಳಿ ಪಾದಚಾರಿ ಮಾರ್ಗದಲ್ಲಿ ಹೋಗುವಾಗ ಬೆಸ್ಕಾಂ ವಿದ್ಯುತ್ ತಂತಿ ತುಳಿದು ತಾಯಿ, ಮಗು ಮೃತಪಟ್ಟ ಘಟನೆ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮಾಧ್ಯಮಗಳ ವರದಿ ಪರಿಗಣಿಸಿ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಆರು ವಾರಗಳಲ್ಲಿ ಘಟನೆ ಬಗ್ಗೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಅದು ನೋಟಿಸ್ ನೀಡಿದೆ.

ಇಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಬೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಸಿಬ್ಬಂದಿ, ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತರಿಗೆ ಯಾವ ರೀತಿ ಪರಿಹಾರ ನೀಡಲಾಗಿದೆ ಎಂಬುದರ ಬಗ್ಗೆ ವಿವರ ನೀಡಿ ಎಂದು ಎನ್‌ಎಚ್‌ಆರ್‌ಸಿ ನೋಟಿಸ್‌ನಲ್ಲಿ ಕೇಳಿದೆ.
ನವೆಂಬರ್ 19 ರಂದು ಭಾನುವಾರ ನಸುಕಿನ ಜಾವ ನಡೆದಿದ್ದ ಈ ಮನಕಲುಕುವ ಘಟನೆ ಬಗ್ಗೆ ನಾಗರಿಕರು ಬೆಸ್ಕಾಂ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಸೌಂದರ್ಯ ಎನ್ನುವ ಮಹಿಳೆ ತಮ್ಮ ಪತಿ ಸಂತೋಷಕುಮಾರ ಹಾಗೂ 9 ತಿಂಗಳ ಮಗು ಸುವಿಕ್ಷಾ ಜೊತೆಯಲ್ಲಿ ನಸುಕಿನ ಜಾವ ಫಾರ್ಮ್ ಜಂಕ್ಷನ್‌ನ ತಂಗುದಾಣಕ್ಕೆ ಬಸ್‌ನಲ್ಲಿ ಬಂದಿಳಿದಿದ್ದರು. ತಂಗುದಾಣದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಎ.ಕೆ.ಗೋಪಾಲ ಕಾಲೊನಿಯಲ್ಲಿ ಪೋಷಕರ ಮನೆಗೆ ನಡೆದುಕೊಂಡು ಹೊರಟಿದ್ದರು.
ರಸ್ತೆಯಲ್ಲಿ ಸರಿಯಾಗಿ ಬೆಳಕಿಲ್ಲದ ಕಾರಣ ಮಗುವನ್ನೆತ್ತಿಕೊಂಡಿದ್ದ ಸೌಂದರ್ಯ ಹರಿದು ಬಿದ್ದ ವಿದ್ಯುತ್ ತಂತಿ ಗಮನಿಸದೆ ಅದರ ಮೇಲೆ ಕಾಲಿಟ್ಟಿದ್ದರು. ಕ್ಷಣಮಾತ್ರದಲ್ಲಿ ವಿದ್ಯುತ್ ತಗುಲಿ ಸಜೀವವಾಗಿ ದಹನವಾಗಿದ್ದರು. ಪತಿ ಹಾಗೂ ಚೀರಾಟ ಕೇಳಿ ದಾರಿಹೋಕರು ಬಂದರೂ ತಾಯಿ-ಮಗುವನ್ನು ರಕ್ಷಿಸಲು ಆಗಲಿಲ್ಲ. ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement