ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ: ಕಾಂಗ್ರೆಸ್‌ ಸದಸ್ಯೆ ಅಸ್ವಸ್ಥ

ಹುಬ್ಬಳ್ಳಿ: ಬುಧವಾರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ನಡೆದು ಸದಸ್ಯೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ಸಭೆಗೆ ಅಗೌರವ ತೋರಲಾಗಿದೆ ಎಂದು ಪಾಲಿಕೆ ಮೇಯರ್ ಮೂವರು ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಪಾಲಿಕೆಯ ಸಾಮಾನ್ಯ ಸಭೆಯ ವೇಳೆ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತಾರಕಕ್ಕೆ ಹೋಗುತ್ತಿದ್ದಂತೆಯೇ ಅಲ್ಲಿದ್ದ ಸದಸ್ಯರನ್ನು ಹೊರಹಾಕಲು ಮಾರ್ಷಲ್​ಗಳನ್ನು ಕರೆಸಲಾಯಿತು. ಪಾಲಿಕೆಯ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲಕುಂಟ್ಲ ಅವರನ್ನು ಮಾರ್ಷಲ್​ಗಳು ಹೊತ್ತುಕೊಂಡು ಬರುತ್ತಿದ್ದಾಗ ಅವರು ಕೆಳಗೆ ಬಿದ್ದು ಅಸ್ವಸ್ಥಗೊಂಡರು. ಸ್ಥಳಕ್ಕೆ ಆಗಮಿಸಿದ ಪಾಲಿಕೆ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿತು. ಸುವರ್ಣ ಕಲಕುಂಟ್ಲ ಅವರಿಗೆ ಸದನದಲ್ಲೇ ವೈದ್ಯಕೀಯ ನೀಡಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸೂಕ್ತ ಆರೈಕೆಯ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದರು.

ಕಾಂಗ್ರೆಸ್ ಸದಸ್ಯರ ಆರೋಪ: ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಕೇಳಿದರೆ ತಮ್ಮ ಪಕ್ಷದ ಸದಸ್ಯರನ್ನು ಹೊರಗೆ ಹಾಕಿ ಸಾಮಾನ್ಯ ಸಭೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಅನುದಾನ ಕೊಟ್ಟಿದೆ. ಈ ವಿಷಯನ್ನು ವಿಷಯ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅವಳಿನಗರದ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಟ್ಟಿದ್ದರೂ ಪಾಲಿಕೆಯ ಬಿಜೆಪಿ ಆಡಳಿತ ಬೇಕಾಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಾಮಾನ್ಯ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮೇಯರ್ ಜ್ಯೋತಿ ಪಾಟೀಲ ಅವರು, ಇದು ಮುಂದುವರೆದ ಸಾಮಾನ್ಯ ಸಭೆ. ಕಳೆದ ಬಾರಿ ಮೇಯರ್ ಚುನಾವಣೆ ಇದ್ದುದರಿಂದ ಹಳೆಯ ವಿಷಯಗಳನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ. ಆದ್ರೆ ವಿಪಕ್ಷದವರು ಸಭೆಯನ್ನು ನಡೆಸಲು ಬಿಡದೆ ಗದ್ದಲ ನಡೆಸಿದರು. ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ. ಸಭೆಗೆ ಘನತೆಯಿದೆ. ಸಭೆಗೆ ಅಗೌರವ ತೋರಿದ ಮೂವರು ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement