ಸಿಎಂ ಆದ ಬಳಿಕ, ತಂದೆ -ತಾಯಿ ಸಮಾಧಿಗೆ ಗೌರವ ಸಲ್ಲಿಸಿದ ಬೊಮ್ಮಾಯಿ

ಹುಬ್ಬಳ್ಳಿ : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ತಾಯಿ ಗಂಗಮ್ಮ ಹಾಗೂ ತಂದೆ, ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು.
ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಧ್ಯಾನ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಎಂದು ನಾನು ಭಾವಿಸಿದ್ದೇನೆ. ಅಧಿಕಾರ ಸ್ವೀಕರಿಸಿದ ನಂತರ ಅವರ ಸಮಾಧಿಗಳ ದರ್ಶನ ಪಡೆದಿರುವೆ ಎಂದರು.
ಮಾಜಿ ಸಚಿವ ಶಿವರಾಂ ಹೆಬ್ಬಾರ, ಶಾಸಕರಾದ ಅಮೃತ ದೇಸಾಯಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ,ಕುಟುಂಬದ ಬಂಧುಗಳು, ಅಭಿಮಾನಿಗಳು ಇದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement