ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾನ ಕೇಂದ್ರಗಳಲ್ಲೂ 48 ಗಂಟೆಗಳ ಒಳಗೆ ಎಷ್ಟು ಹಕ್ಕು ಚಲಾವಣೆಯಾಗಿದೆ ಎಂಬುದರ ಅಂತಿಮ ಅಧಿಕೃತ ದತ್ತಾಂಶ ಬಹಿರಂಗಪಡಿಸಬೇಕು ಎಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಎಷ್ಟು ಮತದಾನವಾಗಿದೆ ಎಂಬುದರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಲು ಏನು ಸಮಸ್ಯೆಯಿದೆ ಎಂದು ಚುನಾವಣಾ ಆಯೋಗದ ವಕೀಲ ಅಮಿತ್‌ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ.
“ಮತದಾನದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಲು ಏನು ಸಮಸ್ಯೆ ಇದೆ ” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.

ಇದಕ್ಕೆ ಶರ್ಮಾ ಅವರು “ನಾವು ಸಾಕಷ್ಟು ದತ್ತಾಂಶ ಸಂಗ್ರಹಿಸಬೇಕಿದ್ದು, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ” ಎಂದರು. ಇದಕ್ಕೆ ಪೀಠವು “ಪ್ರತಿ ಮತಟ್ಟೆಯ ಅಧಿಕಾರಿಯು ಸಂಜೆಯ ವೇಳೆಗೆ ಅಪ್ಲಿಕೇಶನ್‌ನಲ್ಲಿ ದತ್ತಾಂಶ ಹಂಚಿಕೊಳ್ಳುತ್ತಾರಲ್ಲವೇ? ದಿನದ ಅಂತ್ಯಕ್ಕೆ ಚುನಾವಣಾಧಿಕಾರಿಯ ಬಳಿ ಇಡೀ ಕ್ಷೇತ್ರದ ದತ್ತಾಂಶ ಇರುತ್ತದೆ ಅಲ್ಲವೇ ?” ಎಂದು ಪ್ರಶ್ನಿಸಿದರು.
ಇದಕ್ಕೆ ಇಸಿಐ ವಕೀಲರು “ತಕ್ಷಣಕ್ಕೆ ಲಭ್ಯವಾಗುವುದಿಲ್ಲ” ಎಂದರು. ಆಗ ಸಿಜೆಐ ಅವರಿ “ಮಾರನೇಯ ದಿನವಾದರೂ ಸಿಗುವುದಿಲ್ಲವೇ?” ಎಂದರು.
ಅಂತಿಮವಾಗಿ ಪೀಠವು ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು ಹಾಗೂ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿತು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನದ ದಿನದಂದು ಘೋಷಿಸಲಾದ ಆರಂಭಿಕ ಅಂದಾಜಿಗೆ ಹೋಲಿಸಿದರೆ ಮೊದಲ ಎರಡು ಹಂತಗಳಿಗೆ ಇಸಿಐ ಘೋಷಿಸಿದ ಅಂತಿಮ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement