ಬೆಂಗಳೂರು : 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ ಮಾರ್ಚ್ 20ರ ವರೆಗೆ ರಾಜ್ಯಾದ್ಯಂತ ನಡೆಯಲಿದೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಈಯರ್ ಫೋನ್ ಸೇರಿದಂತೆ ಎಲ್ಲಾ ವಿಧದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಪರೀಕ್ಷೆ ಬೆಳಗ್ಗೆ 10 ರಿಂದ 1 ಗಂಟೆ ವರೆಗೆ ನಡೆಯಲಿದೆ.
ದ್ವಿತೀಯ ಪಿಯು ಪರೀಕ್ಷೆಗೆ 7,13,812 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಹೊಸಬರು 6,61,474 ವಿದ್ಯಾರ್ಥಿಗಳಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 34,071 ಹಾಗೂ 18,317 ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 2,91,959 ವಿಜ್ಞಾನ, 2,29,308 ವಾಣಿಜ್ಯ, 1,92,595 ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ.
1,171 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಉಪ/ಜಂಟಿ ಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕೆಗಳ/ಪ್ರಶ್ನೆಪತ್ರಿಕೆಗಳ ಪಾಲಕರನ್ನು ನಿಯೋಜಿಸಲಾಗುತ್ತದೆ. 76 ಕೇಂದ್ರಗಳಲ್ಲಿ 31,000 ಮೌಲ್ಯಮಾಪಕರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಲಿದ್ದಾರೆ.
ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ 2,342 ಸ್ಥಾನಿಕ ಜಾಗೃತ ದಳ, 504 ವಿಚಕ್ಷಣ ಜಾಗೃತದಳ, 365 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ಗುರುತಿಸಲಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ 3 ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ಪ್ರಕಾರ, ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ. .
ವಿದ್ಯಾರ್ಥಿಗಳು ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಮತ್ತು ಮರಳಿ ಮನೆಗೆ ಬರಲು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ಮತ್ತು ಪ್ರವೇಶಪತ್ರವನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ