ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಕಂಪನಿಯೊಂದರ ಮುಖ್ಯಸ್ಥರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳವಾರ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನುಕುಮಾರ ಅವರನ್ನು ಕಂಪನಿ ಮಾಜಿ ಉದ್ಯೋಗಿ ಸಹಚರರ ಜೊತೆ ಸೇರಿ ತಲವಾರ್ನಿಂದ ಹತ್ಯೆ ಮಾಡಿದ್ದ.
ಶಿವಮೊಗ್ಗ ಮೂಲದ ಫೆಲಿಕ್ಸ್ (ಶಬರೀಶ್), ಬೆಂಗಳೂರಿನ ರೂಪೇನಾ ಅಗ್ರಹಾರದ ವಿನಯ ರೆಡ್ಡಿ ಹಾಗೂ ಶಿವು ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಪೊಲೀಸರು ಅಂತಿಮವಾಗಿ ಕುಣಿಗಲ್ ಬಳಿ ಬಂಧಿಸಿದ್ದಾರೆ.
ಫೆಲಿಕ್ಸ್ ಅಲಿಯಾಸ್ ಜೋಕರ್ ಶಬರೀಶ ಎಂಬಾತ ಈ ಮೊದಲು ಏರೋನಿಕ್ಸ್ ಇಂಟರ್ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ಇತ್ತೀಚೆಗೆ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಕೆಲಸದಿಂದ ತೆಗೆದು ಹಾಕಿದ್ದರು ಎನ್ನಲಾಗಿದೆ.
ಈತ ಕಂಪನಿಯಿಂದ ಹೊರಬಂದ ನಂತರ ಸ್ವಂತ ಕಂಪನಿ ಸ್ಥಾಪಿಸಿದ್ದ. ಈ ಉದ್ಯಮಕ್ಕೆ ಫಣೀಂದ್ರ ಎದುರಾಳಿ ಎಂದು ಈತ ಭಾವಿಸಿದ್ದ. ಇದೇ ಕಾರಣಕ್ಕೆ ಫಣೀಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಹೇಳಲಾಗಿದೆ. ಈತ ತನ್ನ ಮೂವರು ಸಹಚರರ ಜತೆಗೆ ಸೇರಿ ಪಂಪಾ ಬಡವಾಣೆಯಲ್ಲಿರುವ ಏರೋನಿಕ್ಸ್ ಕಂಪನಿಗೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಹೋಗಿದ್ದಾನೆ. ಕಂಪನಿಯ ಎಂಡಿ ಫಣೀಂಧ್ರ ಮತ್ತು ಸಿಇಒ ಜೊತೆ ಕೆಲಕಾಲ ಮಾತನಾಡಿದ್ದಾರೆ. ಬಳಿಕ, ಏಕಾಏಕಿ ಶಬರೀಶ (ಫೆಲಿಕ್ಸ್) ತಲ್ವಾರನಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ, ಎಂಡಿಯನ್ನು ರಕ್ಷಿಸಲು ಬಂದ ವಿನುಕುಮಾರ ಅವರ ಮೇಲೆಯೂ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರ 5 ತಂಡ ರಚಿಸಲಾಗಿತ್ತು. ಪೊಲೀಸರು ಆರೋಪಿಗಳ ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಎಸಿಪಿ ರಂಗಪ್ಪ ನೇತೃತ್ವದ ತಂಡದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ