ಕರ್ನಾಟಕ ಪರಿಷತ್‌ ಚುನಾವಣೆ | ಎಲ್ಲ 4 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಗೆಲುವು ; ಕಾಂಗ್ರೆಸ್‌ಗೆ ಮುಖಭಂಗ ; ಅಭ್ಯರ್ಥಿಗಳ ಗೆಲವಿನ ಅಂತರವೆಷ್ಟು ?

ಬೆಂಗಳೂರು: ಕರ್ನಾಟಕದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಜಯಗಳಿಸಿದರೆ, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಜರ್ರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಾಲ್ಕೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಡಳಿತಾರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.
ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಈ ಹಿಂದೆ ಬಿಜೆಪಿಯ ವಶದಲ್ಲಿದ್ದವು. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆದ್ದಿತ್ತು.  ಈ ಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್‌ನ ಜನಪ್ರಿಯತೆ ಹಾಗೂ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಹೊಂದಾಣಿಕೆಗೆ ಒಂದು ಪ್ರಮುಖ ಪರೀಕ್ಷೆ ಎಂದು ಪರಿಗಣಿಸಲಾಗಿತ್ತು.
ಅಕ್ಟೋಬರ್ 23ರಂದು ನಡೆದಿದ್ದ ಮತದಾನದ ಬಳಿಕ ಫಲಿತಾಂಶದ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದರಿಂದ ಅಕ್ಟೋಬರ್ 27ರಂದು ಆರಂಭವಾದ ಮತ ಎಣಿಕೆ ಕೆಲವು ಕ್ಷೇತ್ರಗಳಲ್ಲಿ ಮಧ್ಯರಾತ್ರಿಯವರೆಗೂ ಮುಂದುವರಿಯಿತು.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎ.ಪಿ. ರಂಗನಾಥಗೆ ಜಯ
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 9,902 ಮತಗಳನ್ನು ಪಡೆದಿದ್ದು, ರಂಗನಾಥ್ 908 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಉಳಿದಂತೆಪಕ್ಷೇತರ ಅಭ್ಯರ್ಥಿ ಉಮೇಶಬಾಬು ಪಿಳ್ಳೆಗೌಡ 215 ಮತಗಳನ್ನು ಪಡೆದರೆ, ಕರ್ನಾಟಕ ರಾಷ್ಟ್ರ ಸಮಿತಿಯ ಡಾ. ಜಿ.ಆರ್. ಹೆಬ್ಬೂರು 94 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಡಾ. ಎನ್. ಲಕ್ಷ್ಮಣ ಸ್ವಾಮಿ 24 ಹಾಗೂ ಬಿ.ಎಸ್. ನಾಗರಾಜು 11 ಮತಗಳನ್ನು ಪಡೆದಿದ್ದಾರೆ.
ಶಶೀಲ್ ನಮೋಶಿಗೆ ಐದನೇ ಗೆಲುವು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ಜಿ. ನಮೋಶಿ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ನಮೋಶಿ ಅವರು 15,596 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು 12,299 ಮತಗಳನ್ನು ಗಳಿಸಿದ್ದಾರೆ. ನಮೋಶಿ, 3,297 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ 1,873 ಮತಗಳು ಅಸಿಂಧುವಾಗಿವೆ.
ಎಸ್.ವಿ. ಸಂಕನೂರ ಗೆಲುವು
ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ  ಚಲಾವಣೆಯಾದ ಒಟ್ಟು 63,446 ಮತಗಳಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ 33,711 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 24,388 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಕನೂರ ಅವರು 9323 ಮತಗಳಿಂದ ಜಯಗಳಿಸಿದ್ದಾರೆ.
ಉಳಿದಂತೆ ಪಕ್ಷೇತರ ಅಭ್ಯರ್ಥಿ ಕಾಂತಕುಮಾರ ಆರ್. 4,055 ಮತಗಳು,  ಡಾ. ಜಿ.ಎಚ್. ಇಮ್ರಾಪುರ 338, ಉಮೇಶ ಕೃಷ್ಣಪ್ಪ ದೈವಜ್ಞ 228, ನಿಶಾಂತ ಶಂಕರ ಬಂಕಾಪುರ 143, ಕೆ.ಆರ್.ಎಸ್ ಅಭ್ಯರ್ಥಿ ಕೃಷ್ಣಾ ಎಚ್. ಬಳೆಗಾರ 141, ಅಬ್ದುಲ್ ಮನ್ನಾನ 120, ಸಂತೋಷ ಮನೋಹರ ವೆರ್ಣೆಕರ 85, ಜೀಶಾನ್ ಅಹ್ಮದ್‌ಖಾನ್ ಪಠಾನ್ 62, ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55, ತಳವಾರ ಶಿವಕುಮಾರ 42 ಹಾಗೂ ಜಿಶಾನ್ ಡಿ. ಶಿರಸಂಗಿ ಮತ್ತು ಬಸವರಾಜ ಶಂಕರಪ್ಪ ಕೊಟಗಿ ತಲಾ 39 ಮತಗಳನ್ನು ಪಡೆದಿದ್ದಾರೆ.10,245 ಮತಗಳು ತಿರಸ್ಕೃತಗೊಂಡಿರುವುದು ಗಮನಾರ್ಹವಾಗಿದೆ.
ಕೆ.ಎಂ. ಸುರೇಶಗೆ ಭರ್ಜರಿ ಜಯ
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ. ಸುರೇಶ ಭರ್ಜರಿ ಜಯಗಳಿಸಿದ್ದಾರೆ.  66,020 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ 42,922 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸುರೇಶ ಅವರು 23,098 ಮತಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇತರ ಅಭ್ಯರ್ಥಿಗಳ ಪೈಕಿ ಅಡ್ವೊಕೇಟ್ ಬರೀದ್ 1,107, ಶಶಿ ಹುಲಿಕಟ್ಟಿ 449, ಲಕ್ಷ್ಮಯ್ಯ ಆರ್. (ಆರ್.ಎಲ್.) 387, ಚಿಕ್ಕರಾಜು ಎಸ್. ಯಾದವ್ 377, ಲಕ್ಷ್ಮೀಕಾಂತ ಎಸ್. ಯಾದವ್ 369, ಜಿ.ಸಿ. ಪಟೇಲ್ 162, ಕಪನಿಗೌಡ 156 ಹಾಗೂ ಸೈಯದ್ ಅಫಾಕ್ ಅಹಮದ್ 113 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ 20,076 ಮತಗಳು ತಿರಸ್ಕೃತಗೊಂಡಿವೆ ಎಂಬುದು ಗಮನಾರ್ಹ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement