ಬೆಂಗಳೂರು: ಬಿಪಿಎಲ್ (BPL) ಕಾರ್ಡ್ ಪಡೆಯಲು ವಾರ್ಷಿಕ ಆದಾಯದ ಮಿತಿಯನ್ನು 3 ಲಕ್ಷ ರೂಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ 1.20 ಲಕ್ಷ ರೂ. ವಾರ್ಷಿಕ ಆದಾಯದ ಮಿತಿಯನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸ್ಸಿನಂತೆ 3 ಲಕ್ಷರೂ.ಗಳಿಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಪಡಿತರ ಕಾರ್ಡ್ಗಳ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಕಾರ್ಡ್ ರದ್ದು ಪಡಿಸುವುದಿಲ್ಲ, ಅನರ್ಹ ಕಾರ್ಡ್ಗಳನ್ನು ಎಪಿಎಲ್ ಗೆ ವರ್ಗಾಯಿಸಲಾಗುತ್ತಿದೆ. ಆದಾಯದ ಮಿತಿ ಏರಿಕೆ ಜಾರಿಯಾದ ನಂತರ ಅವರು ಅವರು ಪುನಃ ಬಿಪಿಎಲ್ ಕಾರ್ಡ್ಪಡೆಯಬಹುದು ಎಂದು ಹೇಳಿದರು.
ಆಹಾರ ಇಲಾಖೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದಲ್ಲಿ ಸುಮಾರು 4.42ಕೋಟಿ ಫಲಾನುಭವಿಗಳಿಗೆ 10 ಕೆಜಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಕಾಳಸಂತೆಯನ್ನು ತಡೆಯಲು ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮೂಲಕ ನಿಗಾ ವಹಿಸಲಾಗುತ್ತಿದೆ. ಕಾಳಸಂತೆಗೆ ಮಾರಾಟವಾಗುವ ಪಡಿತರ ಅಕ್ರಮ ತಡೆಯಲು ಸುಮಾರು 1,497 ಎಫ್ಐಆರ್ ದಾಖಲಿಸಿದೆ. ಹಾಗೂ ಸುಮಾರು 50 ಕೋಟಿ ರೂ.ಗಳ ಪಡಿತರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂಎಸ್ ಪಿ ಯೋಜನೆಯಡಿ (5.60 LMT) ಐದು ಲಕ್ಷದ 60 ಸಾವಿರ ಲ್ಯಾಕ್ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿದ್ದು ಅದನ್ನು ಶುದ್ಧೀಕರಿಸಿ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ. ಇಂದಿರಾ ಕಿಟ್ ನೀಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕಿಟ್ ವಿತರಣೆಗೆ ಕಾರ್ಯಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ ಸುಮಾರು 6000 ಕೋಟಿ ರೂ.ಗಳು ವೆಚ್ಚವಾಗಲಿದೆ. ಆದಷ್ಟು ಬೇಗ ಈ ಪ್ರಕ್ರಿಯೆಯು ಅಂತಿಮವಾಗಲಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ