ಹುಬ್ಬಳ್ಳಿ: ತೆರಿಗೆ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರನ್ನು (Deputy Commissioner) ಲೋಕಾಯುಕ್ತ ಪೊಲೀಸರು ಸೋಮವಾರ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧಿತ ಅಧಿಕಾರಿಯನ್ನು ಭರತಕುಮಾರ ಹೆಗಡೆ (48) ಎಂದು ಗುರುತಿಸಲಾಗಿದೆ. ಅಂಕೋಲಾ ಮೂಲದ ಉದ್ಯಮಿ ವಿಶ್ವಜೀತ ನಾಯಕ್ (53) ಎಂಬವರಿಂದ 6 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾ ಕಾರ್ಯಾಚರಣೆ ನಡೆಸಿ ಅವರನ್ನು ಹಿಡಿಯಲಾಗಿದೆ ಎಂದು ಹೇಳಲಾಗಿದೆ.
ದೂರುದಾರ ವಿಶ್ವಜೀತ್ ನಾಯಕ ಅವರು 2019 ರಲ್ಲಿ ಎಂಟು ಟಿಪ್ಪರ್ ಲಾರಿಗಳನ್ನು ಖರೀದಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಮಾರು 60 ಲಕ್ಷ ರೂಪಾಯಿಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಲು ಅವರು ಅರ್ಹರಾಗಿದ್ದರು. ಈ ಪೈಕಿ ಅವರು 34 ಲಕ್ಷ ರೂಪಾಯಿಗಳನ್ನು ಕ್ಲೈಮ್ ಮಾಡಿದ್ದರು.
ಸುಳ್ಳು ದಾಖಲೆ ನೀಡಿ ಟ್ಯಾಕ್ಸ್ ಮರುಪಾವತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವಾಣಿಜ್ಯ ತೆರಿಗೆ ಇಲಾಖೆಯು ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿತ್ತು.
ವಿಚಾರಣೆ ನೆಪದಲ್ಲಿ ನಾಯಕ್ ಅವರಿಗೆ ಈ ಹಿಂದೆ ನಾಲ್ಕು ಬಾರಿ ಸಮನ್ಸ್ ನೀಡಲಾಗಿತ್ತು. ಸೋಮವಾರ ಮತ್ತೆ ವಿಚಾರಣೆಗೆ ಕರೆಸಿದ್ದ ಭರತಕುಮಾರ, ಪ್ರಕರಣವನ್ನು ಕೈಬಿಡಲು ಮೊದಲು 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 6 ಲಕ್ಷ ರೂಪಾಯಿ ನೀಡಲು ಒಪ್ಪಂದವಾಗಿತ್ತು ಎಂದು ಹೇಳಲಾಗಿದೆ.
ಅಧಿಕಾರಿಯ ಬೇಡಿಕೆಯಿಂದ ಬೇಸತ್ತ ಉದ್ಯಮಿ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರು. ಯೋಜನೆಯಂತೆ ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ ದೇವರಾಜ್ ನೇತೃತ್ವದ ತಂಡವು ದಾಳಿ ನಡೆಸಿ, ಹಣ ಪಡೆಯುವ ವೇಳೆ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.
ವಿಶ್ವಾಸಾರ್ಹ ದೂರಿನ ಮೇರೆಗೆ ನಮ್ಮ ತಂಡವು ಬಲೆ ಬೀಸಿ, ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ,” ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ