ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು : ಕನ್ನಡ ಆಡಳಿತ ಭಾಷೆಯಷ್ಟೇ ಅಲ್ಲ, ನ್ಯಾಯದಾನದ ಭಾಷೆಯೂ ಆಗಬೇಕು ಎಂಬುದಕ್ಕೆ ಸ್ಪಂದಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಕನ್ನಡದಲ್ಲಿಯೇ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ಕನ್ನಡದಲ್ಲೇ ತೀರ್ಪು ನೀಡಿದೆ.
ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಅವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು (ಒರಿಜನಲ್‌ ಸೈಡ್‌ ಅಪೀಲ್‌) ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ. ತೀರ್ಪಿನ ಕಾರ್ಯಕಾರಿ (ಆಪರೇಟಿವ್‌) ಭಾಗವನ್ನು ನ್ಯಾ. ದೀಕ್ಷಿತ್‌ ಅವರು ಕನ್ನಡದಲ್ಲಿ ಓದುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಈ ಹಿಂದೆ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಸಹ ಕನ್ನಡದಲ್ಲಿಯೇ ತೀರ್ಪು ನೀಡುವ ಮೂಲಕ ನಾಡಿನ ಗಮನ ಸೆಳೆದಿದ್ದರು. ಆದರೆ, ಅವರ ಕನ್ನಡ ತೀರ್ಪು ಇಂಗ್ಲಿಷ್‌ ತೀರ್ಪಿನ ತರ್ಜುಮೆಯಾಗಿತ್ತು. ಎರಡೂ ತೀರ್ಪುಗಳನ್ನು ಮೂಲ ತೀರ್ಪೆಂದು ಪರಿಗಣಿಸಬೇಕೆಂದು ಅವರು ಆ ವೇಳೆ ಹೇಳಿದ್ದರು
ತೀರ್ಪನ್ನು ಓದಿದ ನಂತರ ನ್ಯಾ. ದೀಕ್ಷಿತ್‌ ಅವರು “ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂದು ಪ್ರತಿಪಾದಿಸಿದರು.
ತೀರ್ಪು ಓದುವುದಕ್ಕೂ ಮುನ್ನ, “ನಿನ್ನೆ (ಡಿ.11, ಬುಧವಾರ) ಭಾರತ ಭಾಷಾ ದಿನವಾದ ಹಿನ್ನೆಲೆಯಲ್ಲಿ ಗುರುವಾರ ಕನ್ನಡದಲ್ಲಿ ಆದೇಶ ಮಾಡುತ್ತಿದ್ದೇವೆ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವ ದಿವಸವೇ ಭಾರತ ಭಾಷಾ ದಿನದ ಉದ್ದೇಶ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನಾವೇ ಎರಡು ಆದೇಶ ಬರೆದಿದ್ದೇವೆ. ಇದು ತರ್ಜುಮೆಯಲ್ಲ. ನಾವೇ ಕನ್ನಡದಲ್ಲಿ ಬರೆದಿದ್ದೇವೆ ಎಂದು ನ್ಯಾ. ದೀಕ್ಷಿತ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

“ ಇಂಗ್ಲೆಂಡ್‌ನಲ್ಲಿ 1730ರವರೆಗೆ ಲ್ಯಾಟಿನ್‌ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ, ಇಂಗ್ಲೆಂಡ್‌ ನ್ಯಾಯಾಲಯದ ಆದೇಶ/ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಶಾಸನ ರೂಪಿಸಿದ್ದರು. ಹೀಗಾಗಿ, 1730ರಿಂದ ಇಂಗ್ಲೆಂಡ್‌ನಲ್ಲಿ ಇಂದಿನವರಿಗೆ ಆಂಗ್ಲ ಭಾಷೆಯಲ್ಲಿಯೇ ಕಲಾಪ ನಡೆಯುತ್ತಿದೆ” ಎಂದರು.
“ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಹಾಗೆ ಮಾಡಲಾಗಿದೆ. ಆದೇಶದ ಸಕಾರಣಗಳನ್ನು ಒಳಗೊಂಡ ಭಾಗ ತಿಳಿಯಲಿ, ಬಿಡಲಿ, ಆಪರೇಟಿವ್‌ ಭಾಗವನ್ನಾದರೂ ಕನ್ನಡದಲ್ಲಿ ನೀಡಬೇಕು. ಆಗ ದಾವೆದಾರರಿಗೆ ತೀರ್ಪು ಅರ್ಥವಾಗುತ್ತದೆ” ಎಂದರು.
ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಬಳಕೆ ಮಾಡಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಆರಂಭಿಸಲಾಗಿದೆ. ಇದರ ಭಾಗವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಸಿ ಎಂ ಜೋಶಿ ಅವರ ನೇತೃತ್ವದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳನ್ನು ಅನುವಾದ ಮಾಡುವ ಸಲಹಾ ಸಮಿತಿಯನ್ನು 2023ರ ಫೆಬ್ರವರಿಯಲ್ಲಿ ರಚಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement