ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಘಟನೆ : ಮೂವರು ಐಪಿಎಸ್‌ ಅಧಿಕಾರಿಗಳಿಗೆ ಕ್ಲೀನ್ ಚಿಟ್

ಬೆಂಗಳೂರು: 2025ರ ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ಪ್ರಶಸ್ತಿ ಸಂಭ್ರಮಾಚರಣೆ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ್ದ ಭೀಕರ  ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಅವರಿಗೆ ಕ್ಲೀನ್ ಚಿಟ್ ನೀಡಿದೆ.
2025ರ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ತಂಡವನ್ನು ಅಭಿನಂದಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಹೊರಭಾಗದಲ್ಲಿ ಜಮಾಯಿಸಿದ್ದರು. ಜನಸಂದಣಿ ನಿಯಂತ್ರಣ ಮೀರಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆಯ ಬಳಿಕ ಜನಸಂದಣಿ ನಿರ್ವಹಣೆ, ಭದ್ರತಾ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಯೋಜನೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಘಟನೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು
ದುರ್ಘಟನೆಯ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಗೆ ಸಂಬಂಧಿಸಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ಅಮಾನತುಗೊಂಡ ಅಧಿಕಾರಿಗಳಲ್ಲಿ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ,ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸಕುಮಾರ ವಿಕಾಸ್, ಅಂದಿನ ಕೇಂದ್ರ ವಿಭಾಗದ ಡಿಸಿಪಿ ಶೇಖರ ಹಾಗೂ ಒಬ್ಬ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ)
ಮತ್ತು ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದ್ದರು.
ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ
ರಾಜ್ಯ ಸರ್ಕಾರ ಮಂಗಳವಾರ ಹೊರಡಿಸಿದ ಸುತ್ತೋಲೆಯ ಪ್ರಕಾರ, ಸಂಬಂಧಿತ ಅಧಿಕಾರಿಗಳು ಸಲ್ಲಿಸಿದ್ದ ಲಿಖಿತ ಉತ್ತರಗಳು ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕ ಇಲಾಖಾ ತನಿಖೆಯನ್ನು ಮುಕ್ತಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಸುತ್ತೋಲೆಯಲ್ಲಿ, “ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸಿರುವ ಉತ್ತರಗಳು ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ನಂತರ,  ಪ್ರಾಧಿಕಾರವು ಅವರ ವಿರುದ್ಧದ ಇಲಾಖಾ ತನಿಖೆಯನ್ನು ಮುಚ್ಚಲು ತೀರ್ಮಾನಿಸಿದೆ” ಎಂದು ತಿಳಿಸಲಾಗಿದೆ.
ಇನ್ನೂ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಕುರಿತ ನಿರ್ಧಾರವೂ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಸ್ಟಾಂಪೀಡ್ ಪ್ರಕರಣ ರಾಜಕೀಯ ಹಾಗೂ ಕಾನೂನು ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿತ್ತು.
ಆ ವರದಿಯಲ್ಲಿ ಘಟನೆಯ ಪ್ರಮುಖ ಹೊಣೆಗಾರಿಕೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿಯ ಮೇಲೇ ಹೊರಿಸಲಾಗಿತ್ತು. ಕಾರ್ಯಕ್ರಮದ ಆಯೋಜನೆಯಲ್ಲಿ ಹಲವು ಗಂಭೀರ ಲೋಪಗಳು ನಡೆದಿರುವುದನ್ನು ಸರ್ಕಾರ ಉಲ್ಲೇಖಿಸಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement