
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು, ಮಂಗಳವಾರ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023ರಲ್ಲಿ ತಮ್ಮ ವಿಮಾನವೊಂದರಲ್ಲಿದ್ದ ಹನುಮಂತನ ಸ್ಟಿಕ್ಕರ್ ತೆಗೆದುಹಾಕಿದೆ.
ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲದ ಕಾರಣ ಅದನ್ನು ತೆಗೆದುಹಾಕಲು ನಿರ್ಧರಿಸಿಸಲಾಗಿದೆ ಎಂದು ಹೇಳಲಾಗಿದೆ.
ಏರೋ ಇಂಡಿಯಾ 2023 ರ ಮೊದಲ ದಿನದಂದು, HAL ತನ್ನ ಸೂಪರ್ಸಾನಿಕ್ ತರಬೇತುದಾರ ವಿಮಾನ HLFT-42 ನ ಪೂರ್ಣ ಪ್ರಮಾಣದ ಮಾದರಿಯನ್ನು ಪ್ರದರ್ಶಿಸಿತು. ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಮಾದರಿ ವಿಮಾನವು ಅದರ ಬಾಲದಲ್ಲಿ ಹನುಮಾನ್ ಚಿತ್ರವನ್ನು ಒಳಗೊಂಡಿತ್ತು.
ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ (HLFT-42) ಅನ್ನು ಸೋಮವಾರ ಹೆಚ್‌ಎಎಲ್ ಪ್ರದರ್ಶಿಸಿತ್ತು. ತರಬೇತಿ ಯುದ್ಧ ವಿಮಾನದ ಹಿಂಭಾಗದಲ್ಲಿ ಲಂಬವಾದ ರೆಕ್ಕೆ ಮೇಲೆ ಭಗವಾನ್ ಹನುಮಂತನ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಹೆಚ್‌ಎಲ್‌ಎಫ್‌ಟಿ-42 ವಿಮಾನವು ಮೊದಲ ಸ್ವದೇಶಿ ವಿಮಾನವಾದ ಹೆಚ್‌ಎಎಲ್ ‘ಮಾರುತʼದ ಉತ್ತರಾಧಿಕಾರಿಯಾಗಿದೆ. ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಲು ನಿರ್ಧರಿಸಿದ್ದೇವೆ ಎಂದು ಏರೋನಾಟಿಕ್ಸ್ ಸಂಸ್ಥೆ ತಿಳಿಸಿದೆ.

ಮಾರುತ ಎಂಬುದು ಗಾಳಿಯ ಇನ್ನೊಂದು ಹೆಸರು, ಇದನ್ನು ‘ಪವನ’ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದಲ್ಲಿ ವಾಯುವಿನ ಪುತ್ರ ಹನುಮಂತ. ಈ ಕಾರಣಕ್ಕೆ ಹನುಮಂತನ ಚಿತ್ರವನ್ನು ಮಾದರಿ ವಿಮಾನದಲ್ಲಿ ಪ್ರದರ್ಶಿಸಲಾಗಿತ್ತು.
ಹೆಚ್‌ಎಲ್‌ಎಫ್‌ಟಿ-42 ಮುಂದಿನ ಪೀಳಿಗೆಯ ಸೂಪರ್‌ಸಾನಿಕ್ ತರಬೇತುದಾರ ಯುದ್ಧ ವಿಮಾನವಾಗಿದ್ದು. ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಈ ವಿಮಾನವು ಅಸ್ತಿತ್ವದಲ್ಲಿರುವ ತರಬೇತುದಾರ ವಿಮಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಏರೋ ಇಂಡಿಯಾ 2023, ಏಷ್ಯಾದ ಅತಿದೊಡ್ಡ ಏರೋ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉದ್ಘಾಟಿಸಿದರು. ಐದು ದಿನಗಳ ಈವೆಂಟ್‌ನಲ್ಲಿ 809 ಕಂಪನಿಗಳು ಮತ್ತು ಸುಮಾರು 98 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಏರೋ ಇಂಡಿಯಾದ 14 ನೇ ಆವೃತ್ತಿಯು ದೇಶವನ್ನು ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಗಳು, ಮಿಲಿಟರಿ ಉಪಕರಣಗಳು ಮತ್ತು ಹೊಸ-ಯುಗದ ಏವಿಯಾನಿಕ್ಸ್‌ಗಳನ್ನು ತಯಾರಿಸಲು ಉದಯೋನ್ಮುಖ ಕೇಂದ್ರವಾಗಿ ಪ್ರದರ್ಶಿಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ