ಭಾರತದಲ್ಲಿ ಎರಡು ಭಿನ್ನ ಲಸಿಕೆಗಳ ಮಿಕ್ಸ್‌ ಮಾಡಿ ನೀಡುವ ಪ್ರಯೋಗಕ್ಕೆ ಅನುಮತಿ

ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ದಕ್ಷತೆ ಪರಿಶೀಲಿಸಲು ಎರಡು ಭಿನ್ನ ಲಸಿಕೆಗಳ ಸಂಯೋಜನೆಯ ಪ್ರಯೋಗಕ್ಕೆ ಕೇಂದ್ರ ಔಷಧ ನಿಯಂತ್ರಕ ಮಂಡಳಿ ಶಿಫಾರಸು ಮಾಡಿದೆ.
ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ಲಸಿಕೆಗಳ ಸಂಯೋಜನೆಯ ಪ್ರಯೋಗ ನಡೆಸಲು ಶಿಫಾರಸು ಮಾಡಿರುವುದಾಗಿ ವರದಿಗಳು ತಿಳಿಸಿವೆ.
ಕೇಂದ್ರ ಔಷಧ ನಿಯಂತ್ರಕ ಮಂಡಳಿಯ ವಿಷಯ ತಜ್ಞರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಈ ಲಸಿಕೆಗಳ ಸಂಯೋಜನೆ ಸಂಬಂಧ ಪ್ರಯೋಗ ನಡೆಸಲು ಅನುಮತಿ ನೀಡಿದ್ದಾರೆ. ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ (ಎಸ್‌ಐಐ)ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳ ನಾಲ್ಕನೇ ಹಂತದ ಪ್ರಯೋಗವನ್ನು ಸುಮಾರು 300 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ನಡೆಸಲು ಅನುಮತಿ ನೀಡಲಾಗಿದೆ.
ಒಂದು ಡೋಸ್ ಕೋವಿಶೀಲ್ಡ್ ಹಾಗೂ ಒಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಿದರೆ ಯಾವ ರೀತಿ ಪ್ರಭಾವ ಬೀರಲಿದೆ, ಏನು ಬದಲಾವಣೆ ಕಾಣಲಿದೆ ಎಂಬುದನ್ನು ತಿಳಿಯಲು ಅಧ್ಯಯನ ನಡೆಸಲಾಗುತ್ತಿದೆ.
ಮೊದಲ ಬಾರಿಗೆ ಭಾರತದಲ್ಲಿ ಲಸಿಕೆಗಳ ಸಂಯೋಜನೆ ಪ್ರಯೋಗ ನಡೆಯುತ್ತಿದೆ. ಮನುಷ್ಯರಲ್ಲಿ ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ ಎರಡು ಭಿನ್ನ ಭಿನ್ನ ಲಸಿಕೆ ಡೋಸ್ ನೀಡುವ ಕುರಿತು ಪ್ರಯೋಗಗಳನ್ನು ನಡೆಸುವಂತೆ ಈ ಹಿಂದೆಯೂ ತಜ್ಞರು ಕೇಂದ್ರವನ್ನು ಕೇಳಿಕೊಂಡಿದ್ದರು. ಈ ಮುನ್ನ ಎಬೋಲಾ ಹಾಗೂ ಏಡ್ಸ್‌ ಸೋಂಕಿಗೂ ಲಸಿಕೆಗಳ ಸಂಯೋಜನೆಯ ಪ್ರಯೋಗವನ್ನು ನಡೆಸಲಾಗಿತ್ತು.
ಎರಡು ಭಿನ್ನ ಕಂಪನಿಯ ಕೊರೊನಾ ಲಸಿಕೆಯ ಡೋಸ್‌ಗಳನ್ನು ನೀಡುವುದು ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ನೆರವಾಗುತ್ತದೆ. ಹೀಗಾಗಿ ಮಿಶ್ರ ಡೋಸ್ ನೀಡಿದರೆ ಕೊರೊನಾ ಸೋಂಕನ್ನು ಹತೋಟಿಗೆ ತರಬಹುದು ಎಂದು ಕೆಲವು ತಜ್ಞರು ಸಲಹೆ ನೀಡಿದ್ದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement