ಹುಲಿ ಉಗುರು ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ನಟ ಜಗ್ಗೇಶ

ಬೆಂಗಳೂರು : ಹುಲಿ ಉಗುರಿನ ಪೆಂಡೆಂಟ್ ವಿವಾದದ ನಡುವೆ, ರಾಜ್ಯಸಭಾ ಸಂಸದ ಮತ್ತು ನಟ ಜಗ್ಗೇಶ ಅವರು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ನೋಟಿಸ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಜಗ್ಗೇಶ ನಿವಾಸದಲ್ಲಿ ನಡೆಸಿದ ಶೋಧದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಜಗ್ಗೇಶ ಅವರು ತಮ್ಮ ಅರ್ಜಿಯಲ್ಲಿ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿದ್ದಾರೆ. ಅಲ್ಲದೆ ತಮಗೆ ನೀಡಿರುವ ನೋಟಿಸ್ ರದ್ದುಗೊಳಿಸುವಂತೆ ಕೋರಿದ್ದು, ತಪಾಸಣೆ ವೇಳೆ ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಜಗ್ಗೇಶ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹುಲಿ ಉಗುರಿನ ಪೆಂಡೆಂಟ್ ಅನ್ನು ತೋರಿಸಿ ಇದು ನಿಜವಾದ ಹುಲಿ ಉಗುರು, ನನ್ನ ತಾಯಿ ಕೊಟ್ಟದ್ದು ಎಂದು ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಬಿಗ್ ಬಾಸ್ ಅಭ್ಯರ್ಥಿ ವರ್ತೂರು ಸಂತೋಷ ಅವರು ಹುಲಿ ಉಗುರು ಧರಿಸಿದ್ದಾರೆಂದು ಅರಣ್ಯಾಧಿಕಾರಿಗಳು ಬಂಧಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.

‘ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್​​ಗೆ ಉತ್ತರಿಸುವ ಮೊದಲೇ ದಾಳಿ ನಡೆದಿದೆ. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು’ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ, ಹುಲಿಗಳು, ಸಿಂಹಗಳು, ಜಿಂಕೆಗಳಂತಹ ಕಾಡು ಪ್ರಾಣಿಗಳನ್ನು ಕೊಲ್ಲುವುದು ಮತ್ತು ಅವುಗಳ ಉಗುರುಗಳು, ಚರ್ಮಗಳು, ಕೊಂಬುಗಳು ಇತ್ಯಾದಿಗಳನ್ನು ಹೊಂದುವುದು ಅಥವಾ ಮಾರಾಟ ಮಾಡುವುದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿದೆ. ಟ್ವೀಟ್ ಮಾಡಿದ ಜಗ್ಗೇಶ್ ಅರಣ್ಯಾಧಿಕಾರಿಗಳು ಭೇಟಿ ನೀಡಿದ ಬಳಿಕ ಟ್ವೀಟ್ ಮಾಡಿದ್ದ ಅವರು, “ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡುವುದಿಲ್ಲ. ಪಾಚ್ಕೊಳಿ” ಎಂದು ಟ್ವೀಟ್ ಮಾಡಿದ್ದರು.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ : ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ನಂತರ ಮತ್ತೊಂದು ಟ್ವೀಟ್ ಮಾಡಿದ ಅವರು, “ನನಗೆ 61 ಮುಂದೆ 100 ಆದರು ನನ್ನ ಅಮ್ಮ ನನ್ನ ದೇವರು,ನಾನು ಏನು ಕಳೆದುಕೊಂಡರು ಸಂಕಟಪಡೋಲ್ಲ ಆದರೆ ನನ್ನ ಅಮ್ಮನ ಕಡೆಪ್ರೀತಿ ಕಳೆದುಕೊಂಡದ್ದು ಶೂನ್ಯದಂತೆ ಆಯಿತು. ತಂದೆತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆತಾಯಿ ಅನಾಥಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ನಾನಿಗಳಿಗೆ ಪ್ರೀತಿ ಅರಿವಾಗದು! ದೇವರಿದ್ದಾನೆ ಉತ್ತರಿಸಲು ಕಾಲಬರುತ್ತದೆ ನಿಮಗು” ಎಂದು ಅವರನ್ನು ಟೀಕಿಸಿದವರಿಗೆ ಉತ್ತರ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement