ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಇಂದು 22 ಶಾಲೆಗಳಿಗೆ ರಜೆ ಘೋಷಣೆ | ವೀಕ್ಷಿಸಿ

ಬೆಳಗಾವಿ : ಬೆಳಗಾವಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಇಲ್ಲಿಯ ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರೋಡ್‌ನಲ್ಲಿ ಸೋಮವಾರ ಬೆಳಿಗ್ಗೆ 6:15ರ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಮಾಹಿತಿ ನೀಡಿದ್ದಾರೆ.ಚಿರತೆ ರಸ್ತೆ ಬದಿ, ನಂತರ ರಸ್ತೆ ಮಧ್ಯೆ ಓಡಿರುವ ದೃಶ್ಯವನ್ನು ಬಸ್ ಚಾಲಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಸ್ವಲ್ಪದೂರದ ವರೆಗೆ ರಸ್ತೆಯ ಒಂದು ಪಕ್ಕದಲ್ಲಿ ನಡೆದಾಡಿದ ಚಿರತೆ ನಂತರ ರಸ್ತೆಯನ್ನು ದಾಟಿ ಮತ್ತೊಂದು ಪಕ್ಕದ ಗಿಡಮರಗಳಿದ್ದಲ್ಲಿ ಸೇರಿಕೊಂಡಿರುವುದು ವೀಡಿಯೊದಲ್ಲಿ ಕಂಡಬರುತ್ತದೆ.
ಚಿರತೆ ನಗರದಲ್ಲೇ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಇಂದು ಪುನಃ 22 ಶಾಲೆಗಳಿಗೆ ರಜೆ ಘೋಷಿಸಿದೆ. ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಆದೇಶ ಹೊರಡಿಸಿದ್ದಾರೆ.

ಕೆಲದಿನಗಳ ಹಿಂದೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹಾಗೂ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ನಂತರ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂಬಂಧ ಚಿರತೆ ಸೆರೆ ಹಿಡಿಯಲು ಗದಗದಿಂದ ವಿಶೇಷ ತಂಡಬಂದಿತ್ತು. ಆದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಈಗ ಇಂದು, ಸೋಮವಾರ ಬೆಳ್ಳಬೆಳಿಗ್ಗೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement