ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹುಬ್ಬಳ್ಳಿ-ಧಾರವಾಡದ ಹವ್ಯಕ ಮಹಿಳಾ ಮಂಡಳದ ವತಿಯಿಂದ 12ನೇ ಹವ್ಯಕ ಹಬ್ಬ ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಜುಲೈ 20ರಂದು ನಡೆಯಲಿದೆ.
ಹವ್ಯಕ ಹಬ್ಬ ವೈಶಿಷ್ಟ್ಯಪೂರ್ಣವಾಗಿದ್ದು ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮೊದಲಾದ ಕಡೆಗಳ ಹವ್ಯಕರ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಭಾಷೆಗಳನ್ನು ಉತ್ತರ ಕರ್ನಾಟಕದ ಜನತೆಗೆ ಪರಿಚಯಿಸುವ ಹಬ್ಬವಾಗಿದೆ.
ಈ ವರ್ಷವೂ ಹವ್ಯಕರ ವೈಶಿಷ್ಟ್ಯಪೂರ್ಣ ಆರತಿ ಕಟ್ಟು ಸ್ಪರ್ಧೆ, ಹವ್ಯಕರ ಮಂಗಳ ಕಾರ್ಯದ ಸಾಂಪ್ರದಾಯಿಕ ಹಾಡುಗಳು ಸ್ಪರ್ಧೆ, ಬಾಳೆ ಹಣ್ಣಿನ ಸಿಹಿ ತಿಂಡಿಗಳು ಮತ್ತು ಅಕ್ಕಿ ತಿಂಡಿಗಳ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ಅವಳಿ ನಗರದಲ್ಲಿ ನೆಲೆಸಿರುವ ಹವ್ಯಕರ ಮಾಹಿತಿಗಳನ್ನೊಳಗೊಂಡ ಹವ್ಯಕ ಸಂಪರ್ಕ ಸೇತು ಸಹ ಬಿಡುಗಡೆಯಾಗಲಿದೆ.
ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಸೆಲ್ಕೋ ಸೋಲಾರ್ ಸಂಸ್ಥೆಯ ಸಿ ಇ ಒ ಮೋಹನ ಭಾಸ್ಕರ್ ಹೆಗಡೆ, ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಕೆ. ಹೆಗಡೆ, ಆರ್ಥಿಕ ತಜ್ಞ ಗೋಪಾಲಕೃಷ್ಣ ಕಡೆಕೋಡಿ, ಅಖಿಲ ಹವ್ಯಕ ಮಹಾಸಭಾ ಕಾರ್ಯದರ್ಶಿ ವೇಣು ವಿಘ್ನೇಶ ಸಂಪ ಆಗಮಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ನಿಮ್ಮ ಕಾಮೆಂಟ್ ಬರೆಯಿರಿ