ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ‘ಪ್ರಜಾಸೇವೆ ಇಲಾಖೆ’ ಸ್ಥಾಪನೆ : ಸಿಎಂ ಘೋಷಣೆ

ಬೆಂಗಳೂರು : “ಸಾರ್ವಜನಿಕರ ಕುಂದುಕೊರತೆಗಳು, ಅಹವಾಲುಗಳನ್ನು ಆಲಿಸಲು “ಪ್ರಜಾಸೇವೆ ಇಲಾಖೆ” ಯನ್ನು ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಇದಕ್ಕಾಗಿಯೇ  ಪ್ರತ್ಯೇಕವಾಗಿ ಸಚಿವರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಹೇಳಿದರು.
“ಜನರ ಕಷ್ಟ ಅರಿತು, ಕಾನೂನು ಚೌಕಟ್ಟಿನಲ್ಲಿ ಸ್ಪಂದಿಸುವುದು ಸರ್ಕಾರದಉದ್ದೇಶವಾಗಿದ್ದು,  ಈ ಇಲಾಖೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲಿದೆ.  ಜನರ ಅಹವಾಲುಗಳನ್ನು ಪರಿಶೀಲನೆ ಮಾಡಿ ಮಾಹಿತಿ ನೀಡುವ ಕೆಲಸ ಮಾಡಿ ಈ ಮೂಲಕ ಜನರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ ಎಂದರು.
ನನಗೆ ಹಾಗೂ ಇತರೇ ಸಚಿವರಿಗೆ ನೀಡಿದ ಮನವಿಗಳನ್ನು ಈ ಇಲಾಖೆ ಅಡಿಯಲ್ಲಿ ತರಲು ಯೋಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿಯ ಜಿಲ್ಲೆಯ ಕ್ಷೇತ್ರಗಳಲ್ಲಿ ವಾರಕ್ಕೆ ಒಮ್ಮೆ ಸ್ಥಳೀಯ ಶಾಸಕರ ಜೊತೆ ಈ ಇಲಾಖೆ ಮೂಲಕ ಜನಸ್ಪಂದನ ಸಭೆಗಳನ್ನು ನಡೆಸಬೇಕು. ಆನಂತರ ಅದನ್ನು ಪರಿಶೀಲಿಸುವ ಕೆಲಸ ಮಾಡಲಾಗುತ್ತದೆ”ಎಂದು ಮಾಹಿತಿ ನೀಡಿದರು.
ವಿದ್ಯುತ್ ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ 
 31.05.2026 ರ ಒಳಗೆ ಪೂರ್ಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿನಾಯಿತಿ ನೀಡಲಾಗಿದ್ದು, ಈ ವಿಚಾರವಾಗಿ ಸರ್ಕಾರಿ ಆದೇಶ ಬಂದ ದಿನದಿಂದ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಫೋಟೋ ಹಾಗೂ ಜಿಪಿಎಸ್ ದಾಖಲೆ ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು” ಎಂದರು. ಗ್ರಾಮೀಣ ಭಾಗದ, ರೇಷ್ಮೆ ಸಾಕಾಣಿಕೆ ಮನೆ, ಕೊಟ್ಟಿಗೆಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡಿದರೆ ಅವುಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
620 ಬಸ್ ಖರೀದಿಗೆ ಅನುಮೋದನೆ 
 235 ಕೋಟಿ ರೂ. ವೆಚ್ಚದಲ್ಲಿ  620 ನೂತನ ಬಸ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶಗಳಿಗೆ 400 ಬಸ್ ಗಳು ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 220 ಬಸ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ.  ಎಲ್ಲಾ ಸಾರಿಗೆ ನಿಗಮಗಳ ಅಡಿಯಲ್ಲಿ 112 ಕೋಟಿ ರೂ.ಗಳ ವೆಚ್ಚದಲ್ಲಿ.11 ಕಡೆ ಎಲೆಕ್ಟ್ರಿಕ್ ಬಸ್ ಗಳ ಡಿಪೋಗಳನ್ನು ತೆರೆಯಲಾಗುತ್ತದೆ ಎಂದರು.
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ 
ಯಾದಗಿರಿಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ100 ಕೋಟಿ ರೂ. ವೆಚ್ಚದಲ್ಲಿ ನೂತನ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 18 ಕೋಟಿ ರೂ. ವೆಚ್ಚದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆರು ಸಿವಿಲ್ ಕಾಮಗಾರಿಗಳಿಗೆ ಮತ್ತು ಬೆಂಗಳೂರು ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸುಮಾರು 60 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement