ಚಿರತೆ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಸಾವು

ಚಾಮರಾಜನಗರ: ಜಿಲ್ಲೆಯ ಕಗ್ಗಲಿಗುಂದಿ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಚಿರತೆ ದಾಳಿಯಿಂದ ಬಾಲಕಿಯ ದವಡೆ ಮೂಳೆ ಮುರಿದಿತ್ತು ಹಾಗೂ ಮುಖ ಊದಿಕೊಂಡಿತ್ತು, 14 ದಿನಗಳಿಂದ ಮೈಸೂರಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜು‌ಲೈ 11ರಂದು ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿತ್ತು. ಆದರೆ ಇಂದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಅಸುನೀಗಿದ್ದಾಳೆ.
ಚಿರತೆ ದಾಳಿಯಿಂದ ಮೃತಪಟ್ಟ ಬಾಲಕಿ ಸುಶೀಲ ಕುಟುಂಬಕ್ಕೆ ಸರ್ಕಾರ 15 ಲಕ್ಷ ರೂ ಘೋಷಣೆ ಮಾಡಿದೆ. ಮೃತ ಬಾಲಕಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ರಾಮು ಮತ್ತು ಲಲಿತಾ ದಂಪತಿಯ ಪುತ್ರಿ ಸುಶೀಲಾ ಒಬ್ಬಳೇ ಮನೆ ಮುಂದೆ ಆಟವಾಡುತ್ತಿದ್ದಳು. ಎಲ್ಲಿಂದಲೋ ಬಂದ ಚಿರತೆ ಬಾಲಕಿಯ ಮೇಲೆ ದಾಳಿ ನಡೆಸಿ ಕಾಡಿಗೆ ಎಳೆದೊಯ್ಯಲು ಯತ್ನಿಸಿತ್ತು. ಅದು ಅವಳನ್ನು 200 ಮೀಟರ್ ವರೆಗೆ ಎಳೆದುಕೊಂಡು ಹೋಗಿತ್ತು. ಬಾಲಕಿಯ ಕಿರುಚಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ದೊಣ್ಣೆ ಬೀಸಿ ಚಿರತೆಯನ್ನು ಓಡಿಸಿದ್ದರು. ಘಟನೆಯಲ್ಲಿ ಬಾಲಕಿ ಸುಶೀಲ ಗಂಭೀರವಾಗಿ ಗಾಯಗೊಂಡಿದ್ದು, ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement