ಬೆಂಗಳೂರು : ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಮೂಲಕ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಇಡೀ ಜಗತ್ತಿಗೆ ಪರಿಚಯವಾಗಿದ್ದ ಈಗ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ ತಂಡದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಕ್ಕೆ ತಮಗೆ ಭರವಸೆ ನೀಡಿದಂತೆ ಹಣ ನೀಡಿಲ್ಲ ಎಂದು ದೂರಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬೊಮ್ಮನ್ ಹಾಗೂ ಬೆಳ್ಳಿ ಈ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕಿ ಕಾರ್ತಿಕಿ ಅವರಿಗೆ ಈ ದಂಪತಿ ಲೀಗಲ್ ನೋಟಿಸ್ ಕಳುಹಿಸಿದ್ದು, ಅದರಲ್ಲಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಕಾರ್ತಿಕಿ ಗೋನ್ಸಾಲ್ವಿಸ್ ನಿರ್ದೇಶನದಲ್ಲಿ ಮೂಡಿಬಂದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಕ್ಕಿದೆ. ಈ ಡಾಕ್ಯುಮೆಂಟರಿಯಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಗಮನ ಸೆಳೆದಿದ್ದರು. ಆನೆಯನ್ನು ಅವರು ನೋಡಿಕೊಂಡ ರೀತಿಗೆ ಎಲ್ಲರೂ ಭಾವುಕರಾಗಿದ್ದರು. ಆನೆ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಅದ್ಭುತವಾಗಿ ವಿವರಿಸಲಾಗಿತ್ತು. ಈಗ ಈ ದಂಪತಿ ಸಿನಿಮಾ ನಿರ್ಮಾತೃರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ದೂರಿದ್ದಾರೆ.
ಸಾಕ್ಷ್ಯಚಿತ್ರ ಶೂಟ್ ಮಾಡುವ ಸಂದರ್ಭದಲ್ಲಿ ಒಂದು ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿತ್ತು. ಒಂದು ವಾಹನ ಹಾಗೂ ಆರ್ಥಿಕ ಸಹಾಯ ಮಾಡುವುದಾಗಿ ಕಾರ್ತಿಕಿ ಈ ದಂಪತಿಗೆ ಭರವಸೆ ನೀಡಿದ್ದರು. ಆದರೆ, ಅದ್ಯಾವುದನ್ನೂ ಕೊಟ್ಟಿಲ್ಲ. ‘ನಮ್ಮನ್ನು ರಿಯಲ್ ಹೀರೋಗಳು ಎಂದು ಎಲ್ಲ ಕಡೆಗಳಲ್ಲೂ ಪರಿಚಯಿಸಲಾಯಿತು. ಆದರೆ, ತಂಡದವರ ಕಡೆಯಿಂದ ನಮಗೆ ಹಣದ ಸಹಾಯ ಸಿಕ್ಕಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಣಿಗೆಗಳನ್ನು ತಂಡದವರು ಸ್ವೀಕರಿಸಿದ್ದಾರೆ. ಆದರೆ, ನಮಗೆ ಯಾವುದೇ ಪರಿಹಾರ ನೀಡದೆ ತಂಡದವರು ಎಲ್ಲಾ ಹಣಕಾಸಿನ ಲಾಭಗಳನ್ನು ಪಡೆದಿದ್ದಾರೆ, ಆದರೆ ನಮಗೆ ಯಾವುದೇ ಹಣ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ