ಯುಗಾದಿ ಹಬ್ಬ, ಸಾಲು ಸಾಲು ರಜೆ; ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬಗಳಿಗೆ ರಜೆ ಇರುವ ಕಾರಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳನ್ನು ವ್ಯವಸ್ಥೆ ಮಾಡಿದೆ. ಒಟ್ಟು 2275 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ಸಂಸ್ಥೆಯ ನಾಲ್ಕು ನಿಗಮಗಳು ನಿರ್ಧರಿಸಿದೆ.
ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದೆ. ಬಳಿಕ ಏಪ್ರಿಲ್‌ 11 ಕ್ಕೆ ರಂಜಾನ್‌ ಹಬ್ಬವಿದೆ. ವಾರಾಂತ್ಯದಿಂದ ಮುಂದಿನ ವಾರ ಮಧ್ಯ ಭಾಗದವರೆಗೂ ಸಾಲು ಸಾಲು ರಜೆಗಳಿರುವುದರಿಂದ ಏಪ್ರಿಲ್‌ 6 ರಿಂದ 8 ರವರೆಗೂ (ಶನಿವಾರ, ಭಾನುವಾರ ಹಾಗೂ ಸೋಮವಾರ) 3 ದಿನಗಳ ಕಾಲ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಸಾರಿಗೆ ಸಂಸ್ಥೆಯಿಂದ ಈ ಹೆಚ್ಚುವರಿ ಬಸ್‌ಗಳ ಸೌಲಭ್ಯ ಸಿಗಲಿದೆ
ಕೆಎಸ್‍ಆರ್ ಸಿಯಿಂದ 1,750 ಬಸ್, ಎನ್‍ಡಬ್ಲ್ಯೂಕೆಎಸ್‍ಆರ್‌ಟಿಸಿಯಿಂದ 145 ಬಸ್, ಕೆಕೆಆರ್‍ ಟಿಸಿಯಿಂದ 200 ಬಸ್ ಹಾಗೂ ಬಿಎಂಟಿಸಿಯಿಂದ 180 ವಿಶೇಷ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಏ.7 ಭಾನುವಾರ, ಏಪ್ರಿಲ್‌ 9 ಮಂಗಳವಾರ ಯುಗಾದಿ ಹಬ್ಬ, ಗುರುವಾರ ಏಪ್ರಿಲ್‌ 11ರಂದು ರಂಜಾನ್ ಇದೆ. ಏಪ್ರಿಲ್‌ 13 ಎರಡನೇ ಶನಿವಾರ ರಜೆ ಹಾಗೂ 14ರಂದು ಭಾನುವಾರದ ರಜೆ ಇದೆ. ಎಂಟು ದಿನದಲ್ಲಿ ಒಟ್ಟು 5 ರಜೆಗಳು ಸಿಗಲಿದೆ. ಹೀಗಾಗಿ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿರಲಿದೆ. ಇದನ್ನು ಮನಗಂಡು ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಮೇಕೆದಾಟು : ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಸಾವು

ಎಲ್ಲಿಂದ ಎಲ್ಲಿಗೆ ಬಸ್‌ ಸೌಲಭ್ಯ? ಯಾವಾಗ?
ಏಪ್ರಿಲ್‌ 6 (ಶನಿವಾರ) ಬೆಂಗಳೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳು, ಪ್ರಮುಖ ಸ್ಥಳಗಳು ಹಾಗೂ ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಈ ಬಸ್‌ ಸೌಲಭ್ಯ ಇರಲಿದೆ. ಜತೆಗೆ ಜಿಲ್ಲಾ ಕೇಂದ್ರಗಳ ನಡುವೆಯೂ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ.
ಬೆಂಗಳೂರಿನ ಈ ಸ್ಥಳಗಳಿಂದ ಬಸ್‌ ಹೊರಡಲಿದೆ..:
ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್‌): ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಬೆಳಗಾವಿ ಸೇರಿ‌ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ,‌ ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ಹೆಚ್ಚುವರಿ ಬಸ್ ವ್ಯವಸ್ಥೆ ಇರಲಿದೆ.
ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣ: ಮೈಸೂರು, ಚಾಮರಾಜನಗರ, ಮಡಿಕೇರಿ ಭಾಗಗಳಿಗೆ ಹೆಚ್ಚುವರಿ ಬಸ್‌ ಸೌಲಭ್ಯ ಇರಲಿದೆ.
ಶಾಂತಿನಗರ ಬಿಎಂಟಿಸಿ ನಿಲ್ದಾಣ – ತಮಿಳುನಾಡು ಹಾಗೂ ಕೇರಳ ಭಾಗಗಳಿಗೆ ಸಂಚರಿಸುವ ಮಾರ್ಗದ ಹೆಚ್ಚುವರಿ ಬಸ್‌ಗಳ ಸೇವೆ ದೊರೆಯಲಿದೆ.
ಕೆಎಸ್‌ಆರ್‌ಟಿಸಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯ ಆರಂಭಿಸಿದೆ. ವಿವಿಧ ಮಾದರಿಯ ರಿಯಾಯಿತಿಗಳು ಲಭ್ಯವಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಪ್ರಮುಖ ಸುದ್ದಿ :-   ಪ್ರಜ್ವಲ್ ಅಶ್ಲೀಲ ವೀಡಿಯೊ ಪ್ರಕರಣ : ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಿದ ರಾಜ್ಯ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement