ಚುನಾವಣಾ ಸಮಯದಲ್ಲಿ ಮತದಾರರಿಗೆ ಆಮಿಷದ ಪ್ರಕರಣ : ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಿಂದ ನೋಟಿಸ್‌

ಬೆಂಗಳೂರು : ಗ್ಯಾರಂಟಿ ಘೋಷಣೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮಿಷದ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಅನರ್ಹಗೊಳಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿದೆ.
ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ.ಶಂಕರ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನಿಲದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಪ್ರಮೀಳಾ ನೇಸರ್ಗಿ ಅವರು “ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆ ಸಮನಾಗಿದೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು.
ಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತು.
“ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123 (1) ಪ್ರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು ಲಂಚಕ್ಕೆ ಸಮ. ಸೆಕ್ಷನ್‌ 123 (2) ಪ್ರಕಾರ ಇದು ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್‌ 123 (4)ರ ಪ್ರಕಾರ ಅದನ್ನು ಪ್ರಚಾರ ಮಾಡುವುದೂ ಅಪರಾಧ. ಅಲ್ಲದೇ, ಇದನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದಿರುವುದು ಸೆಕ್ಷನ್‌ 123 (6)ರ ಅಪರಾಧವಾಗಿದೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement