
ಬೆಂಗಳೂರು: ಕರ್ನಾಟಕದಲ್ಲಿ ನೂತನವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಚಿವ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೇ ಭಿನ್ನಮತ ಶಮನಗೊಳಿಸುವ ದೊಡ್ಡ ಸವಾಲು ಎದುರಾಗಿದೆ. ಕಳೆದ ವಾರವಷ್ಟೇ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶಿವಕುಮಾರ ಅವರಿಗೆ, ಇದೀಗ ಮತ್ತಷ್ಟು ಆಂತರಿಕ ಅಸಮಾಧಾನದ ಬಿಸಿ ತಟ್ಟುವ ಮುನ್ಸೂಚನೆಗಳು ಕಾಣಿಸುತ್ತಿವೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೃಷ್ಣ ಬೈರೇಗೌಡ ಅವರಿಗೆ ‘ಬೃಹತ್ ಬೆಂಗಳೂರು ಅಭಿವೃದ್ಧಿ’ ಖಾತೆಯನ್ನು ನೀಡಲಾಗಿದ್ದರೂ, ಅವರು ಇದುವರೆಗೆ ಅಧಿಕಾರ ಸ್ವೀಕರಿಸಿಲ್ಲ. ಖಾತೆ ಹಂಚಿಕೆಯಲ್ಲಿ ಸ್ಪಷ್ಟತೆ ಇಲ್ಲದಿರುವ ಕಾರಣ ಅವರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಕೃಷ್ಣ ಬೈರೇಗೌಡ ಅವರಿಗೆ ಬೃಹತ್ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲಾಗಿದ್ದರೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳು (ಬಿಎಂಆರ್‌ಡಿಎ) ಮುಖ್ಯಮಂತ್ರಿಗಳ ಬಳಿಯೇ ಉಳಿದುಕೊಂಡಿರುವುದು ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆ. ಇದೇ ವೇಳೆ, ಖಾತೆ ಗೊಂದಲದ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಕೃಷ್ಣ ಬೈರೇಗೌಡ ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನಕ್ಕಾಗಿ ತೀವ್ರಗೊಂಡ ಲಾಬಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಳೆದ ವಾರವಷ್ಟೇ 13 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಸಂಪುಟದಲ್ಲಿ ಇನ್ನೂ 21 ಸ್ಥಾನಗಳು ಖಾಲಿ ಇದ್ದು, ಸಚಿವ ಸ್ಥಾನ ಆಕಾಂಕ್ಷಿಗಳಿಂದ ಭಾರಿ ಲಾಬಿ ಆರಂಭವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆಯ ಗೊಂದಲದ ನಡುವೆಯೇ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರೂ ಸಹ ದೆಹಲಿಗೆ ಹಾರಿದ್ದಾರೆ. ರಿಜ್ವಾನ್ ಅರ್ಷದ್ ಅವರು ‘ಬೃಹತ್ ಬೆಂಗಳೂರು ಆಡಳಿತ ಮಸೂದೆ, 2024’ರ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಮಿತಿಯ ಶಿಫಾರಸಿನ ಮೇರೆಗೆ ‘ಬೃಹತ್ ಬೆಂಗಳೂರು ಪ್ರಾಧಿಕಾರ’ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಸಂಪುಟ ವಿಸ್ತರಣೆಗೂ ಮುನ್ನ ಸಚಿವ ಸ್ಥಾನಕ್ಕಾಗಿ ಅವರು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಮಲಿಂಗಾರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದ್ದ ಖಾತೆ
ಜೂನ್ 3 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಎರಡೇ ದಿನಗಳಲ್ಲಿ (ಜೂನ್ 5) ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿ ಪಕ್ಷಕ್ಕೆ ಶಾಕ್ ನೀಡಿದ್ದರು. ತಮಗೆ ಬೆಂಗಳೂರು ಅಭಿವೃದ್ಧಿ ಖಾತೆಯ ಭರವಸೆ ನೀಡಲಾಗಿತ್ತು, ಆದರೆ ಅದನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಿ, ತಮಗೆ ನೀರಾವರಿ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದರು. ನಂತರ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದರು.
ಮುನಿಯಪ್ಪ ಅವರಿಂದಲೂ ಅತೃಪ್ತಿ ಬಹಿರಂಗ
ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ವಾರದಲ್ಲೇ ಸರಣಿ ಅಸಮಾಧಾನಗಳು ಕಾಂಗ್ರೆಸ್ ಪಾಳಯವನ್ನು ಮುಜುಗರಕ್ಕೀಡುಮಾಡಿವೆ. ರಾಮಲಿಂಗಾರೆಡ್ಡಿ ಅವರ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಕೂಡ ತಮಗೆ ಹಂಚಿಕೆಯಾಗಿರುವ ಖಾತೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ತಮಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, “ನಾನು ಸಚಿವ ಸಂಪುಟದಲ್ಲೇ ಅತ್ಯಂತ ಹಿರಿಯ ಸದಸ್ಯನಾಗಿದ್ದು, ಸಿನಿಯಾರಿಟಿ ಆಧಾರದ ಮೇಲೆ ನನಗೆ ಇನ್ನೂ ಪ್ರಮುಖವಾದ ಖಾತೆಯನ್ನು ನೀಡಬೇಕಿತ್ತು. ಈ ಬಗ್ಗೆ ನಾನು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕತ್ವಕ್ಕೆ ತಿಳಿಸಿದ್ದೇನೆ,” ಎಂದು ಹೇಳಿದ್ದರು. ಅಲ್ಲದೆ, ಖಾತೆ ಬದಲಾವಣೆ ಕುರಿತು ತಮ್ಮ ನಿರೀಕ್ಷೆಗಳನ್ನು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವುದಾಗಿ ಅವರು ತಿಳಿಸಿದ್ದರು. ನಂತರ ಅವರು ಹೈಮಾಂಡ್ ನಾಯಕರು ಅವರ ಜೊತೆ ಮಾತನಾಡಿದ ನಂತರ ತಣ್ಣಗಾಗಿದ್ದರು. ಆದರೆ, ಈಗ ಹೈಪ್ರೊಫೈಲ್ ಖಾತೆ ಪಡೆದಿದ್ದರೂ ಕೃಷ್ಣ ಬೈರೇಗೌಡ ಅವರು ಇನ್ನೂ ತಮ್ಮ ಬೆಂಗಳೂರು ನಗರಾಭಿವೃದ್ಧು ಖಾತೆಯ ಅಧಿಕಾರ ಸ್ವೀಕರಿಸದಿರುವುದು ಕುತೂಹಲ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ