ರಾಜ್ಯಸಭಾ ಚುನಾವಣೆ: ಆರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ವಿವಿಧ ರಾಜ್ಯಗಳಿಂದ ಸ್ಪರ್ಧಿಸಲಿರುವ ಆರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ತೆಲಂಗಾಣದ ಇಬ್ಬರು ಹಾಗೂ ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಿಂದ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ಸೇರಿದ್ದಾರೆ.
ಅಭ್ಯರ್ಥಿಗಳ ವಿವರ:
ತೆಲಂಗಾಣ: ಅಭಿಷೇಕ ಮನು ಸಿಂಘ್ವಿ ಮತ್ತು ವೇನ ನರೇಂದರ ರೆಡ್ಡಿ
ಛತ್ತೀಸ್‌ಗಢ: ಫುಲೋ ದೇವಿ ನೇತಮ್
ಹರಿಯಾಣ: ಕರಮ್‌ವೀರ ಸಿಂಗ್ ಬೌದ್ಧ್.
ಹಿಮಾಚಲ ಪ್ರದೇಶ: ಅನುರಾಗ್ ಶರ್ಮಾ.
ತಮಿಳುನಾಡು: ಎಂ. ಕ್ರಿಸ್ಟೋಫರ್ ತಿಲಕ್ ಅವರ ಹೆಸರನ್ನು ಪ್ರಕಟಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಈ ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ.
ತೆಲಂಗಾಣದಲ್ಲಿ ಎರಡು ಸ್ಥಾನಗಳು ಖಾಲಿ
ತೆಲಂಗಾಣದಲ್ಲಿ ಅಭಿಷೇಕ್ ಸಿಂಘ್ವಿ ಮತ್ತು ಬಿಆರ್‌ಎಸ್ ಪಕ್ಷದ ಕೆ.ಆರ್. ಸುರೇಶ್ ರೆಡ್ಡಿ ಅವರ ಅಧಿಕಾರ ಅವಧಿಯು ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡು ಸ್ಥಾನಗಳು ಖಾಲಿಯಾಗಲಿವೆ. ಪ್ರಸ್ತುತ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ, ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಅಭಿಷೇಕ ಸಿಂಘ್ವಿ ಅವರು ಸುಲಭವಾಗಿ ಮರು ಆಯ್ಕೆಯಾಗುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಮಾರ್ಚ್ 16 ರಂದು ರಾಜ್ಯಸಭಾ ಚುನಾವಣೆ
ಮಾರ್ಚ್ 16 ರಂದು ರಾಜ್ಯಸಭಾದ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ಸೇರಿದಂತೆ 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ವರ್ಷ ಹಾಲಿ ಸದಸ್ಯರು ನಿವೃತ್ತರಾಗುತ್ತಿರುವುದರಿಂದ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ರಾಜ್ಯಸಭಾ ಸ್ಥಾನಗಳು ಮಹಾರಾಷ್ಟ್ರದಲ್ಲಿ 7 ಆಗಿದ್ದರೆ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ತಲಾ ಆರು ಸ್ಥಾನಗಳು ಖಾಲಿಯಾಗುತ್ತಿವೆ. ಒಡಿಶಾದಲ್ಲಿ 4 ಸ್ಥಾನಗಳು ಖಾಲಿಯಾಗಲಿವೆ. ಅಸ್ಸಾಂನಲ್ಲಿ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಛತ್ತೀಸ್‌ಗಢ ಮತ್ತು ಹರಿಯಾಣ, ತೆಲಂಗಾಣದಲ್ಲಿ ತಲಾ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲಿ 1 ಸ್ಥಾನ ಚುನಾವಣೆ ನಡೆಯಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement