ಪ್ರಧಾನಿ ಮೋದಿ ವಿರುದ್ಧ ‘ಭಯೋತ್ಪಾದಕ’ ಪದ ಬಳಕೆ : ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ‘ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಂಗಳವಾರ ಚುನಾವಣಾ ಆಯೋಗಕ್ಕೆ (EC) ದೂರು ನೀಡಿದೆ. ಖರ್ಗೆ ಅವರು ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು ಮತ್ತು ಅರ್ಜುನ ರಾಮ ಮೇಘವಾಲ್ ಅವರನ್ನೊಳಗೊಂಡ ನಿಯೋಗವು ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಿದೆ.
ಖರ್ಗೆ ಅವರ ಹೇಳಿಕೆಯು ಮೇಲ್ನೋಟಕ್ಕೆ ಚುನಾವಣಾ ನೀತಿ ಸಂಹಿತೆಯ (MCC) ಉಲ್ಲಂಘನೆಯಾಗಿದ್ದು, ಆಯೋಗವು ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 175, 171/174 ಮತ್ತು 356(1) ಅಡಿಯಲ್ಲಿ ಖರ್ಗೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಖರ್ಗೆ ಅವರು ಚುನಾವಣಾ ಪ್ರಚಾರ ನಡೆಸದಂತೆ ಸೂಕ್ತ ನಿರ್ಬಂಧ ಹೇರಬೇಕು. ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಈ ವಿವಾದಿತ ಹೇಳಿಕೆಯ ಪ್ರಸಾರವನ್ನು ತಕ್ಷಣವೇ ಸ್ಥಗಿತಗೊಳಿಸಲು ಮತ್ತು ಈಗಾಗಲೇ ಇರುವ ವಿಡಿಯೋಗಳನ್ನು ತೆಗೆದುಹಾಕಲು ನಿರ್ದೇಶಿಸಬೇಕು ಎಂದು ನಿಯೋಗವು ಒತ್ತಾಯಿಸಲಿದೆ ಎಂದು ಬಿಜೆಪಿ ಹೇಳಿದೆ.
ಚುನಾವಣಾ ಪ್ರಕ್ರಿಯೆಯ ಘನತೆಯನ್ನು ಕಾಪಾಡಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಪ್ರಚಾರಕ್ಕೆ ಅವಕಾಶ ಮಾಡಿಕೊಡಲು ಆಯೋಗವು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ತನ್ನ ಅರ್ಜಿಯಲ್ಲಿ ಬಲವಾಗಿ ಆಗ್ರಹಿಸಿದೆ.
ವಿವಾದಕ್ಕೆ ಕಾರಣವಾದ ಖರ್ಗೆ ಹೇಳಿಕೆ….
ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಟೀಕಿಸುವ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ‘ಭಯೋತ್ಪಾದಕ’ ಎಂಬ ಪದ ಬಳಸಿದ್ದರು. ಕೇಂದ್ರ ತನಿಖಾ ಸಂಸ್ಥೆಗಳನ್ನು ಮತ್ತು ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡು ವಿಪಕ್ಷಗಳನ್ನು ಹತ್ತಿಕ್ಕುವ ಮೂಲಕ ಪ್ರಧಾನಿಯವರು ರಾಜಕೀಯ ಪಕ್ಷಗಳು ಮತ್ತು ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಖರ್ಗೆ ನೀಡಿದ ಸ್ಪಷ್ಟನೆ:
ಸುದ್ದಿಗಾರರು ಈ ಬಗ್ಗೆ ಹೆಚ್ಚಿನ ವಿವರಣೆ ಕೇಳಿದಾಗ, ಖರ್ಗೆ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಸ್ಪಷ್ಟನೆ ನೀಡಿದರು. “ನಾನು ಅವರನ್ನು ಅಕ್ಷರಶಃ ಭಯೋತ್ಪಾದಕ ಎಂದು ಕರೆದಿಲ್ಲ. ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ‘ಭಯಭೀತರನ್ನಾಗಿಸುತ್ತಿದ್ದಾರೆ’ (Terrorising) ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷಗಳ ಮೇಲೆ ಸವಾರಿ ಮಾಡುತ್ತಿದ್ದಾರೆ, ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ತಿಳಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement