ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳ ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್)ಗಳ ಬಳಸಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಗುರುವಾರ (ಸೆಪ್ಟೆಂಬರ್ ೪) ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಾದ ಪರಿಷ್ಕರಣೆ ಮಾಡಲು, ಅಗತ್ಯ ಕಾನೂನುಗಳನ್ನು ಮಾಡಲು ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ” ಎಂದು ಎಚ್.ಕೆ. ಪಾಟೀಲ ಹೇಳಿದರು. ಇವಿಎಂ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
“ಮುಂಬರುವ ಎಲ್ಲ ಸ್ಥಳೀಯ ಚುನಾವಣೆಗಳನ್ನು ಇವಿಎಂಗಳ ಬದಲಿಗೆ ಮತಪತ್ರಗಳಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಇವಿಎಂಗಳ ಬಗ್ಗೆ ಜನರಲ್ಲಿ ವಿಶ್ವಾಸ ಮತ್ತು ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಇದುವರೆಗೂ ಗ್ರಾಮ ಪಂಚಾಯತ ಚುನಾವಣೆಯನ್ನು ಬ್ಯಾಲೆಟ್ ಪೇಪರ್ನಲ್ಲಿಯೇ ನಡೆಸಲಾಗುತ್ತಿತ್ತು. ಆದರೆ, ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ