ಹೊಸಪೇಟೆ-ವಾಸ್ಕೋಡಗಾಮ, ಲೊಂಡಾ-ಮೀರಜ್ ಮಾರ್ಗಗಳಲ್ಲಿ ರೈಲಿನ ವೇಗ ತಗ್ಗಿಸಲು ಮನವಿ: ಅರಣ್ಯ ಇಲಾಖೆಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೊಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ರಾತ್ರಿ ವೇಳೆ ರೈಲುಗಳ ವೇಗ ತಗ್ಗಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಅರಣ್ಯ ಇಲಾಖೆಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ, ಬೆಳಗಾವಿ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರು ಅರ್ಜಿ ಕುರಿತು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿದ ಪೀಠವು ವಿಚಾರಣೆಯನ್ನು ಮುಂದೂಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಹೊಸಪೇಟೆ- ವಾಸ್ಕೋಡಗಾಮ ಮತ್ತು ಲೊಂಡಾ-ಮೀರಜ್ ರೈಲು ಮಾರ್ಗದಲ್ಲಿ ರಾತ್ರಿ ವೇಳೆ ರೈಲುಗಳ ಅಧಿಕ ವೇಗದ ಚಾಲನೆಯಿಂದ ಕಾಡು ಪ್ರಾಣಿಗಳು ಸಾಯುತ್ತಿವೆ. ಇದರಿಂದ ವೇಗದ ಮಿತಿ ತಗ್ಗಿಸಲು ರೈಲ್ವೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಪರಿಸರವಾದಿ ಗಿರಿಧರ್ ಕುಲಕರ್ಣಿ ಎಂಬವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ದೇಶಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರೈಲು ಮಾರ್ಗಗಳಲ್ಲಿ ವೇಗದ ಮಿತಿ ಕಡಿಮೆಗೊಳಿಸುವಂತೆ ರೈಲ್ವೆ ಇಲಾಖೆಗೆ ಸುಪ್ರಿಂ ಕೋರ್ಟ್ ನಿರ್ದೇಶಿಸಿದೆ. ಅದರಂತೆ ರಾಜ್ಯದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸಲಿದೆ ಎಂದು ನ್ಯಾಯಾಲಯ ಹೇಳಿದ್ದು, ದೇಶದ ಯಾವುದೇ ಭಾಗದಲ್ಲಿರುವ ವನ್ಯಜೀವಿ ಸಂಪತ್ತು ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಮೌಖಿಕವಾಗಿ ಹೇಳಿತು.
ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೋಂಡಾ-ಮೀರಜ್ ಮಾರ್ಗಗಳು ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಸಂರಕ್ಷಿತ ಅರಣ್ಯಗಳ ನಡುವೆ ಹಾದುಹೋಗಿವೆ. ಲಭ್ಯ ಮಾಹಿತಿ ಪ್ರಕಾರ 2014ರಿಂದ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಆನೆ, ಕಾಡುಕೋಣ, ಕರಡಿ, ಕಾಡುನಾಯಿ, ಕಾಡುಹಂದಿ ಹಾಗೂ ಜಿಂಕೆಗಳು ಸೇರಿ 60ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement