ವಾರದಲ್ಲಿ ಸರ್ಕಾರಕ್ಕೆ ಮೇಕೆದಾಟು ಯೋಜನೆ ವರದಿ ಸಲ್ಲಿಕೆ ಸಾಧ್ಯತೆ

posted in: ರಾಜ್ಯ | 0

ರಾಮನಗರ: ಕುಡಿಯುವ ನೀರಿನ ಪ್ರಮುಖ ಯೋಜನೆಯಾಗಿರುವ ಮೇಕೆದಾಟು ಯೋಜನೆಯಿಂದ ಅರಣ್ಯಪ್ರದೇಶ ಮುಳುಗಡೆಯಾಗಲಿರುವುದರಿಂದ ಅರಣ್ಯ ಇಲಾಖೆಗೆ ಬದಲಿ ಜಾಗಕ್ಕಾಗಿ ಸರ್ವೇ ಮಾಡಿ ಗುರುತಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ಸಂಬಂಧ ಸರ್ಕಾರಕ್ಕೆ ರಾಮನಗರ ಜಿಲ್ಲಾಡಳಿತ ವರದಿ ಸಲ್ಲಿಸಲಿದೆ.

ಮೇಕೆದಾಟು ಯೋಜನೆ ಈ ಬಾರಿ ಜೀವ ಬರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆಯ ಸಂಪೂರ್ಣ ಡಿಪಿಆರ್ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ಮತ್ತೆ ತಮಿಳುನಾಡು ತಕರಾರು ಮಾಡಿದ ಪರಿಣಾಮ ಯೋಜನೆಗೆ ಬ್ರೇಕ್ ಬಿತ್ತು. ಆದರೆ ಈಗ ಹಸಿರು ಪೀಠದ ಜೊತೆಗೆ ಸುಪ್ರೀಂಕೋರ್ಟ್ ಸಹ ಯೋಜನೆ ಪರವಾಗಿ ತೀರ್ಪು ನೀಡಿದೆ. ರಾಮನಗರ ಜಿಲ್ಲಾಡಳಿತ ಸಹ ಯೋಜನೆ ಆದಷ್ಟು ಬೇಗ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ  ಆಗಿದ್ದ ಅವಧಿಯಲ್ಲಿ  ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ಅಧಿಕೃತವಾಗಿ ಈ ಬಗ್ಗೆ ಪ್ರಸ್ತಾಪಿಸಿತ್ತು. ಕೇಂದ್ರ ಸರ್ಕಾರದ ಅನುಮತಿ ಪಡೆದು ಶೀಘ್ರ ಕಾಮಗಾರಿಗೆ ಚಾಲನೆ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಅದರಿಂದ ಮುಂದಕ್ಕೆ ಹೆಚ್ಚೇನೂ ಪ್ರಗತಿ ಆಗಲಿಲ್ಲ. ಸದ್ಯ ಇದರ ವಿಸ್ತೃತ ಯೋಜನಾ ವರದಿಯು (ಡಿಪಿಆರ್) ಕೇಂದ್ರ ಸರ್ಕಾರದ ಮುಂದೆ ಇದೆ. ಕಾವೇರಿ ನೀರು ಹಂಚಿಕೆ ತೀರ್ಪು ಹೊರಬಿದ್ದ ಬಳಿಕ ಇದಕ್ಕೆ ಒತ್ತಡ ಹೆಚ್ಚಿದೆ. ರಾಜ್ಯವು ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಕಾನೂನಿನ ಅಡ್ಡಿ ಇರದು ಎಂಬ ಕಾನೂನು ತಜ್ಞರ ಹಿನ್ನೆಲೆಯಲ್ಲಿ ಯೋಜನೆ ಮುಂದುವರಿಸಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ ನಂತರದಲ್ಲಿ ಚುನಾವಣೆ ಸುದ್ದಿಯೊಳಗೆ ಅಣೆಕಟ್ಟೆ ನಿರ್ಮಾಣದ ಸಂಗತಿ ತಣ್ಣಗಾಗಿತ್ತು.

ಪ್ರಮುಖ ಸುದ್ದಿ :-   ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ 4 ತಾಲೂಕುಗಳ ಶಾಲೆಗಳಿಗೆ ನಾಳೆ (ಜುಲೈ 4)ರಜೆ ಘೋಷಣೆ

ಕೇಂದ್ರ ಜಲ ಆಯೋಗಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವು ಸಲ್ಲಿಸಿದ್ದ ವರದಿಯಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಮಾರು ೫,೬೧೨ ಕೋಟಿ ನಿರ್ಮಾಣ ವೆಚ್ಚ ಅಂದಾಜಿಸಲಾಗಿತ್ತು, ಆದರೆ ಈಗ ಅದು ೯ ಸಾವಿರ ಕೋಟಿಗೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.  ಇದರಿಂದ ಸುಮಾರು ೬೦.೧೭ ಟಿಎಂಸಿ ನೀರನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ  ಜಿಲ್ಲೆಗಳಾದ ರಾಮನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಒಟ್ಟು ೧೨ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಹಾಗಾಗಿ ಆದಷ್ಟು ಬೇಗ ಈ ಯೋಜನೆಯನ್ನ ಪ್ರಾರಂಭ ಮಾಡಬೇಕು ಎಂದು ಮೇಕೆದಾಟು ಹೋರಾಟ ಸಮಿತಿ ಸಂಚಾಲಕ ಗೋ.ರಾ.ಶ್ರೀನಿವಾಸ್ ಈಗಿನ  ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮೇಕೆದಾಟು ಜಲಾಶಯದ ಸುತ್ತಮುತ್ತ ಬಹುಪಾಲು ಅರಣ್ಯ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಸಂಬಂಧಿಸಿದ ಟ್ರಿಬ್ಯುನಲ್ ನ ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಯೋಜನೆ ಅನುಷ್ಠಾನಗೊಂಡರೆ, ಬೆಂಗಳೂರಿಗರಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ರಾಮನಗರವೂ ಸೇರಿದಂತೆ  ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಇದರೊಂದಿಗೆ ಜೊತೆಗೆ ೪೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾರವಾರ: ಕೊಡಸಳ್ಳಿ ಡ್ಯಾಂ ರಸ್ತೆಯಲ್ಲಿ ಗುಡ್ಡ ಕುಸಿತ

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಅಂದಾಜು ೨,೫೦೦ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದ್ದು, ಬದಲಿ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಈಗಾಗಲೇ ಬದಲಿ ಜಾಗವನ್ನು ಸರ್ವೆ ಮಾಡಲಾಗಿದೆ. ರಾಮನಗರ ಜಿಲ್ಲೆಯಾದ್ಯಂತ ಜಾಗವನ್ನು ಸರ್ವೆ ಮಾಡಲಾಗಿದ್ದು ಕೊನೆ ಹಂತ ತಲುಪಿದೆ. ಇನ್ನೊಂದು ವಾರದಲ್ಲಿ ಅರಣ್ಯ ಇಲಾಖೆಗೆ ಜಾಗವನ್ನು ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಆದಷ್ಟು ಬೇಗ ಸಿವಿಲ್ ಕೆಲಸಗಳು ಪ್ರಾರಂಭವಾಗಲಿದೆ. ನಂತರ ಡ್ಯಾಂ ಕೆಲಸ ಸರ್ಕಾರದ ಹಂತದಲ್ಲಿ ಪ್ರಾರಂಭವಾಗಲಿದೆ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement