ಬುಲಂದಶಹರ್ (ಉತ್ತರ ಪ್ರದೇಶ): ಕೇವಲ ಒಂದು ಡಬ್ಬಿ ಟಾಫಿ (ಚಾಕೊಲೇಟ್) ಕದ್ದಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿತದ ಅಮಲಿನಲ್ಲಿದ್ದ ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು ಮರದ ದಣ್ಣೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದಶಹರ್ ಜಿಲ್ಲೆಯ ನರೋರಾ ವ್ಯಾಪ್ತಿಯ ರತನ್ಪುರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಪೂಜಾ (12) ಎಂದು ಗುರುತಿಸಲಾಗಿದೆ. ಮಾರ್ಚ್ 26, ಗುರುವಾರದಂದು ಪೂಜಾ ಹತ್ತಿರದ ಅಂಗಡಿಯೊಂದಕ್ಕೆ ಹೋಗಿದ್ದಾಗ, ಅಲ್ಲಿಂದ ಟಾಫಿ ಬಾಕ್ಸ್ ಕದ್ದಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಅಂಗಡಿಯವನು ಹಾಲು ಮಾರಾಟಗಾರನಾಗಿರುವ ಬಾಲಕಿಯ ತಂದೆ ಪಪ್ಪು ಅಲಿಯಾಸ್ ಪುಷ್ಪೇಂದ್ರನಿಗೆ ದೂರು ನೀಡಿದ್ದ.
ವರದಿಗಳ ಪ್ರಕಾರ, ಪುಷ್ಪೇಂದ್ರ ಮದ್ಯವ್ಯಸನಿಯಾಗಿದ್ದು, ಅಂಗಡಿಯವನ ದೂರಿನಿಂದ ತೀವ್ರ ಆಕ್ರೋಶಗೊಂಡಿದ್ದ. ಸಂಜೆ ಮನೆಗೆ ಮರಳಿದ ಆತ, ಮಗಳು ಪೂಜಾಳನ್ನು ಮನಬಂದಂತೆ ಥಳಿಸಲು ಆರಂಭಿಸಿದ. ಕೈಯಲ್ಲಿದ್ದ ಮರದ ದಣ್ಣೆಯಿಂದ ಆಕೆಯ ತಲೆ ಮತ್ತು ದೇಹಕ್ಕೆ ಹೊಡೆದಿದ್ದಾನೆ. ಬಾಲಕಿ ಪ್ರಜ್ಞೆ ತಪ್ಪಿ ಬೀಳುವವರೆಗೂ ಆಕೆಗೆ ಹೊಡೆದಿದ್ದಾನೆ.
ಪೂಜಾಳ ತಾಯಿ ಆರತಿ ತನ್ನ ಮಗಳನ್ನು ರಕ್ಷಿಸಲು ಹೋದಾಗ, ಪುಷ್ಪೇಂದ್ರ ಆಕೆಯನ್ನು ತಳ್ಳಿದ್ದಾನೆ. ಈ ವೇಳೆ ಆರತಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಮಗಳನ್ನು ಹೊಡೆದು ಪ್ರಜ್ಞೆ ತಪ್ಪಿಸಿದ ನಂತರ, ಪುಷ್ಪೇಂದ್ರ ತನ್ನ ಪತ್ನಿ ಮತ್ತು ಇತರ ಮೂವರು ಮಕ್ಕಳನ್ನು (ಒಬ್ಬ ಮಗಳು ಮತ್ತು ಇಬ್ಬರು ಪುತ್ರರು) ಮನೆಯೊಳಗೆ ಹಾಕಿ ಹೊರಗಿನಿಂದ ಬೀಗ ಜಡಿದು ಪರಾರಿಯಾಗಿದ್ದಾನೆ. ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ತಡರಾತ್ರಿ ತಾಯಿ ಆರತಿ ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಬಾಗಿಲು ಮುರಿದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಬಾಲಕಿ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ:
ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಮೇಲೆ ನಡೆದ ದೌರ್ಜನ್ಯದ ಭೀಕರತೆಯನ್ನು ಬಿಚ್ಚಿಟ್ಟಿದೆ. ಪೂಜಾಳ ದೇಹದ ಮೇಲೆ ಸುಮಾರು 10 ರಿಂದ 12 ಗಾಯದ ಗುರುತುಗಳಿದ್ದು, ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದಿದೆ ಹಾಗೂ ಮೂಳೆ ಮುರಿತವಾಗಿರುವುದು ಸಾವಿಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಪತ್ನಿ ಆರತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪುಷ್ಪೇಂದ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ