ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು

ಬೆಂಗಳೂರು: ಬೆಂಗಳೂರು ನಗರದ ಜನಪ್ರಿಯ ಉಪಹಾರ ಗೃಹ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಯುಎಪಿಎ (UAPA) ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 1ರ ಸುಮಾರಿಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಿಂದ ಹೋಟೆಲ್ ಸಿಬ್ಬಂದಿ, ಗ್ರಾಹಕರು ಸೇರಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ (UAPA) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಧಿವಿಜ್ಞಾನ ತಜ್ಞರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ಅದು ತಿಳಿಸಿದೆ.

ಬಾಂಬ್ ಸ್ಫೋಟ ಎನ್ನುವುದು ತಿಳಿಯುತ್ತಿದ್ದಂತೆಯೇ ಈ ಪ್ರಕರಣವನ್ನು ಪೊಲಿಸರು ಗಂಭೀರವಾಗಿ ಪರಿಗಣಿಸಿದ್ದು, ಬಾಂಬ್ ಇಟ್ಟು ಹೋಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕಮಾಂಡ್ ಸೆಂಟರ್ ನಲ್ಲಿ ಆರೋಪಿ ಚಲನವಲನದ ಪರಿಶೀಲನೆ ನಡೆಸುತ್ತಿದ್ದು, ರಾಮೇಶ್ವರಂ ಕೆಫೆ ಮಾರ್ಗದಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಪೊಲಿಸರು ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ ಅವರು, ‘ಮಧ್ಯಾಹ್ನ 12ರ ಸುಮಾರಿಗೆ 30 ವರ್ಷದ ವ್ಯಕ್ತಿ ಬ್ಯಾಗ್ ತಂದಿಟ್ಟಿದ್ದ. ನಂತರ ಟೋಕನ್ ತೆಗೆದುಕೊಂಡು ರವೆ ಇಡ್ಲಿ ಸೇವಿಸಿ ಹೋಗಿದ್ದಾನೆ. ಟೈಮರ್ ಇಟ್ಟು ಮಧ್ಯಾಹ್ನ 12:55ಕ್ಕೆ ಕಡಿಮೆ ತೀವ್ರತೆ ಬಾಂಬ್ ಸ್ಫೋಟವಾಗಿದೆ. ಸ್ಫೋಟದಲ್ಲಿ ಗ್ರಾಹಕರು, ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಜೀವಕ್ಕೆ ಅಪಾಯವಿಲ್ಲ. ಬ್ಯಾಗ್ ತಂದಿಟ್ಟಿದ್ದ ವ್ಯಕ್ತಿಯ ಚಹರೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸ್ ಇಲಾಖೆಯ ವಿವಿಧ ತಂಡಗಳು ತನಿಖೆ ನಡೆಸುತ್ತಿವೆ. ಜನರು ಆತಂಕಪಡುವುದು ಬೇಡ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement