
ಬಳ್ಳಾರಿ: ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಆರಂಭವಾದ ಜಗಳ ಭೀಕರ ಸಂಘರ್ಷಕ್ಕೆ ತಿರುಗಿದ್ದು, ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಬ್ಯಾನರ್ ಅಳವಡಿಸುತ್ತಿದ್ದರು. ಈ ವೇಳೆ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ನಿವಾಸದ ಮುಂಭಾಗ ಬ್ಯಾನರ್ ಹಾಕಲು ಮುಂದಾದಾಗ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಇದು ವಿಕೋಪಕ್ಕೆ ತಿರುಗಿ, ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.
ಗುಂಡಿನ ದಾಳಿ ಮತ್ತು ಸಾವು:
ಗಲಾಟೆ ತೀವ್ರಗೊಂಡಾಗ ಘರ್ಷಣೆಯಲ್ಲಿ ರಾಜಶೇಖರ ಎಂಬ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದು, ಬಳ್ಳಾರಿ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ರಾಜಕೀಯ ಕೆಸರೆರಚಾಟ:
ನಾವು ಸಾರ್ವಜನಿಕ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದೇವೆ. ವಾಲ್ಮೀಕಿ ಸಮುದಾಯದ ಕಾರ್ಯಕ್ರಮವನ್ನು ತಡೆಯಲು ಕೆಲವರು ಸಂಚು ರೂಪಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಶಾಂತಿ ಕದಡಲು ಈ ರೀತಿ ಮಾಡುತ್ತಿದ್ದಾರೆ. ಈ ಸಾವಿಗೆ ಜನಾರ್ದನ ರೆಡ್ಡಿಯವರೇ ಜವಾಬ್ದಾರರು ಎಂದು ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
“ನಾನು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಗುಂಡು ಹಾರಿಸಿದ್ದಾರೆ. ಇದು ನನ್ನನ್ನು ಮುಗಿಸಲು ಕಾಂಗ್ರೆಸ್ ಮಾಡಿದ ಸಂಚು. ಭರತ್ ರೆಡ್ಡಿ ಜೊತೆಗಿರುವವರೆಲ್ಲಾ ಅಪರಾಧಿ ಹಿನ್ನೆಲೆಯವರು. ಖಾಸಗಿ ಗನ್ ಮ್ಯಾನ್‌ಗಳನ್ನು ಕರೆತಂದಿರುವುದು ಕಾನೂನು ಬಾಹಿರ ಎಂದು
ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಪೊಲೀಸ್ ಬಿಗಿಬಂದೋಬಸ್ತ್:
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸದ್ಯ ಜನಾರ್ದನ ರೆಡ್ಡಿ ನಿವಾಸದ ಸುತ್ತಮುತ್ತ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಬಿಜೆಪಿ ನಾಯಕ ಬಿ. ಶ್ರೀರಾಮುಲು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ