
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮೆಫೆಡ್ರೋನ್ (Mephedrone) ಉತ್ಪಾದನಾ ಘಟಕಗಳ ಮೇಲೆ ಮಹಾರಾಷ್ಟ್ರ ಡ್ರಗ್ ವಿರೋಧಿ ದಳ (ANTF) ನಡೆಸಿದ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಇದು ಕೇವಲ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆಯಲ್ಲ, ಬದಲಿಗೆ ಅವರ ಜೊತೆಗೆ ಕರ್ನಾಟಕ ಪೊಲೀಸರು ಮತ್ತು ಎನ್‌ಸಿಬಿ (NCB) ತಂಡಗಳ ‘ಜಂಟಿ ಕಾರ್ಯಾಚರಣೆ’ ಎಂದು ಅವರು ತಿಳಿಸಿದ್ದಾರೆ.
ಮುಂಬೈನಲ್ಲಿ ಬಂಧಿತನಾದ ಆರೋಪಿಯ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದರು. ನಮ್ಮ ಡಿಸಿಪಿ ನೇತೃತ್ವದ ತಂಡ, ಎನ್‌ಸಿಬಿ ಮತ್ತು ವಿಧಿವಿಜ್ಞಾನ ತಂಡಗಳು ಈ ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ ಎಂದು ತಿಳಿಸಿದ್ದಾರೆ.

ಈ ದಾಳಿಯಲ್ಲಿ ₹55.88 ಕೋಟಿ ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ ಎಂಬ ಮಹಾರಾಷ್ಟ್ರ ಪೊಲೀಸರ ಹೇಳಿಕೆಯನ್ನು ಸಚಿವರು ನಿರಾಕರಿಸಿದ್ದಾರೆ. ಜಪ್ತಿ ಮಾಡಲಾದ ಸುಮಾರು 3.5 ಕೆಜಿ ಕೆಮಿಕಲ್‌ನ ಮೌಲ್ಯ ಸರಿಸುಮಾರು ₹1.20 ಕೋಟಿ ಮಾತ್ರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾದಂತೆ ಮೂರು ಘಟಕಗಳ ಮೇಲೆ ದಾಳಿ ನಡೆದಿಲ್ಲ, ಬದಲಿಗೆ ಕೇವಲ ಒಂದು ಸ್ಥಳದಲ್ಲಿ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಡ್ರಗ್ಸ್ ಮುಕ್ತ ಭಾರತಕ್ಕಾಗಿ ಇದು ಒಂದು ಸಾಮೂಹಿಕ ಪ್ರಯತ್ನ,” ಎಂದು ಪರಮೇಶ್ವರ್ ಹೇಳಿದರು.
ಹೊಸ ವರ್ಷದ ಮುನ್ನೆಚ್ಚರಿಕೆ:
ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಪೂರೈಕೆ ತಡೆಯಲು ನವೆಂಬರ್‌ನಿಂದಲೇ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಈವರೆಗೆ ರಾಜ್ಯದಲ್ಲಿ ಅಂದಾಜು ₹165 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ತಡೆಯಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ