ರಾಯಚೂರು: ಕಲುಷಿತ ನೀರು ಕುಡಿದು ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆ

ರಾಯಚೂರು: ರಾಯಚೂರು ನಗರಸಭೆ ಸರಬರಾಜು ಮಾಡುತ್ತಿರುವ ಕಲುಷಿತ ನೀರು ಕುಡಿದು ಬುಧವಾರ ಮತ್ತೊಬ್ಬರು ಸಾವಿಗೀಡಾಗಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದಂತಾಗಿದೆ.
ಅಂದ್ರೂನ್ ಕಿಲ್ಲಾದ 50 ವರ್ಷ ವಯಸ್ಸಿನ ಅಬ್ದುಲ್ ಕರೀಂ ಬುಧವಾರ ಮೃತಪಟ್ಟಿದ್ದಾರೆ. ವಾಂತಿ – ಭೇದಿಯಿಂದಾಗಿ ಕಳೆದ ಮೂರು ದಿನಗಳಿಂದ ಅಬ್ದುಲ್ ಕರೀಂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದಿಂದ ಅಬ್ದುಲ್ ಕರೀಂ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಯಚೂರು ನಗರದ 35 ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ರಾಂಪುರ ಜಲಾಶಯದಿಂದ ರಾಯಚೂರು ನಗರಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಕಳೆದ 15 ವರ್ಷಗಳಿಂದ ಟ್ಯಾಂಕರ್ ಸ್ವಚ್ಚಗೊಳಿಸದೆ ಇರುವುದರಿಂದ ನೀರು ಕುಡಿದ ನಾಗರಿಕರು ಸಾವಿಗೀಡಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಲುಷಿತ ನೀರು ಕುಡಿದು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ರಾಂಪುರ ಜಲ ಶುದ್ಧೀಕರಣ ಘಟಕದ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅರ್ಚನಾ, ‘ನೀರಿನ ಶುದ್ದೀಕರಣ ಹಾಗೂ ಸರಬರಾಜು ಮಾಡುವಲ್ಲಿ ಸಿಬ್ಬಂದಿಯಿಂದ ನಿರ್ಲಕ್ಷ್ಯವಾಗಿದೆ. ಈಗಾಗಲೇ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಉಳಿದವರ ತಪ್ಪಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಶುದ್ದೀಕರಣ ಘಟಕದಲ್ಲಿನ ಪ್ರಯೋಗಾಲಯ ಕಳೆದ ಎರಡು ತಿಂಗಳಿಂದ ಕಾರ್ಯ ನಿರ್ವಹಿಸಿಲ್ಲ. ಇಲ್ಲಿ ಸಿಬ್ಬಂದಿಯೂ ಇಲ್ಲ. ಜಲ ಶುದ್ದಿಕರಣಕ್ಕೆ ಬೇಕಾದ ಅಗತ್ಯ ರಾಸಾಯನಿಕಗಳನ್ನೂ ಇಲ್ಲಿ ಸಂಗ್ರಹಿಸಿ ಇಟ್ಟಿಲ್ಲ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೀರಿನ ಶುದ್ದೀಕರಣ ಹಾಗೂ ಸರಬರಾಜು ವ್ಯವಸ್ಥೆಯ ಲೋಪಗಳನ್ನ ಪರಿಶೀಲಿಸುತ್ತಿದ್ದೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಗರಸಭೆಗೆ ಸೂಚನೆ ನೀಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement