
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಭಾನುವಾರ ಮೂವರ ಮೇಲೆ ಚಿರತೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರು ಭಾನುವಾರ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗ ಅವರಿಗೆ ಚಿರತೆ ಕಂಡಿದ್ದು,
ಹೆದರಿ ಓಡಿ ಬಂದ ಅವರು ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೊರ ಹೋಗುವ ಮಕ್ಕಳ ಮೇಲೆ ಚಿರತೆ ದಾಳಿ ಮಾಡಿದರೆ ಎಂದು ಆತಂಕಗೊಂಡ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಚಿರತೆ ಬೆದರಿಸಲು ಬೊಬ್ಬೆ ಹಾಕುತ್ತ ಹೋಗಿದ್ದಾರೆ. ಆಗ ಅಡಗಿದ್ದ ಚಿರತೆ ಹಠಾತ್ ದಾಳಿ ಮಾಡಿದ್ದು, ಗ್ರಾಮದ ರಮೇಶ (35) ಮೇಲೆ ದಾಳಿದೆ. ಅವರನ್ನು ತಪ್ಪಿಸಲು ಹೋದ ಮಲ್ಲಣ್ಣ (42), ರಂಗನಾಥ (29) ಅವರ ಮೇಲೆಯೂ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಮೂವರು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಅನೇಕ ದಿನಗಳಿಂದ ಚಿರತೆ ಓಡಾಟದ ಬಗ್ಗೆ ದೂರುಗಳಿದ್ದವು. ಎನ್.ಗಣೆಕಲ್ , ಜಾಲಹಳ್ಳಿ ಸೇರಿ ವಿವಿಧೆ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ