ಚೆಕ್ ಬೌನ್ಸ್ ಪ್ರಕರಣ: ಮಧು ಬಂಗಾರಪ್ಪಗೆ 6.96 ಕೋಟಿ ರೂ. ದಂಡ; ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ

ಬೆಂಗಳೂರು : ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶುಕ್ರವಾರ 6.96 ಕೋಟಿ ರೂ. ಮೊತ್ತದ ಭಾರಿ ದಂಡ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಂಡ ಕೊಡದೆ ಹೋದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದೆ.
ಮಧು ಬಂಗಾರಪ್ಪ ನಿರ್ದೇಶಕರಾಗಿರುವ ಆಕಾಶ್‌ ಆಡಿಯೋ ಸಂಸ್ಥೆ ಹಾಗೂ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನ ನಡುವಿನ ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್‌ ಅವರು ಈ ಆದೇಶ ನೀಡಿದ್ದಾರೆ. ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆಯ ಸಂಹಿತೆಯ 255 (2)ರಡಿ ನೀಡಲಾದ ಅಧಿಕಾರ ಬಳಸಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ನೆಗೋಷಬಲ್‌ ಇನ್ಸ್‌ಟ್ರುಮೆಂಟ್‌ ಕಾಯಿದೆಯ ಸೆಕ್ಷನ್‌ 138ರ ಅಡಿ ಆರೋಪಿ ನಂಬರ್‌ 1 (ಆಕಾಶ್‌ ಆಡಿಯೋ- ವೀಡಿಯೊ ಪ್ರೈ ಲಿಮಿಟೆಡ್‌) ಮತ್ತು ಆರೋಪಿ ನಂ 2 (ಎಸ್‌ ಬಿ ಮಧುಚಂದ್ರ ಅಲಿಯಾಸ್‌ ಮಧು ಬಂಗಾರಪ್ಪ) 6,96,70,000 ರೂ. ದಂಡವನ್ನು ಪಾವತಿಸಬೇಕು. ತಪ್ಪಿದಲ್ಲಿ ಮಧು ಬಂಗಾರಪ್ಪ ಆರು ತಿಂಗಳ ಅವಧಿಗೆ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

ವರದಿ ಪ್ರಕಾರ, ದಂಡದ  ಮೊತ್ತದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 357ರ ಪ್ರಕಾರ ಅದರಲ್ಲಿ ರೂ 6,96,70,000/- ದೂರುದಾರರಿಗೆ (ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌) ನೀಡಬೇಕು. ಉಳಿದ 10,000 ರೂ. ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಮಧು ಬಂಗಾರಪ್ಪ ನಿರ್ದೇಶಕರಾಗಿರುವ ಆಕಾಶ ಆಡಿಯೋ ಸಂಸ್ಥೆಯು ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನಿಂದ ಅಂತರ್‌ ಕಾರ್ಪೊರೇಟ್‌ ಠೇವಣಿ (ಐಸಿಡಿ) ಹಣವಾಗಿ ಆರು ಕೋಟಿ ರೂ.ಗಳನ್ನು ಪಡೆದಿತ್ತು. ಸಂಸ್ಥೆಯ ನಿರ್ದೇಶಕರಾದ ಮಧು ಬಂಗಾರಪ್ಪ ಅವರು ಈ ಸಂಬಂಧ ಐಸಿಡಿ ಸ್ವೀಕೃತಿಯನ್ನು ಖಚಿತ ಪಡಿಸಿದ್ದರು. ಅಲ್ಲದೆ, ಇದನ್ನು ಹಿಂದಿರುಗಿಸುವ ಭರವಸೆಯನ್ನು ನೀಡಿ ಕಾನೂನಾತ್ಮಕವಾಗಿ ಹಿಂಪಡೆಯಬಹುದಾದ ಈ ಸಾಲದ ಹಣಕ್ಕೆ ಪ್ರತಿಯಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ 6.60 ಕೋಟಿ ರೂ. ಮೊತ್ತದ ಚೆಕ್‌ ಅನ್ನು 16-07-2011ರಂದು ನೀಡಿದ್ದರು.
ಆದರೆ, 27-11-2011ರಂದು ಚೆಕ್‌ ಬೌನ್ಸ್‌ ಆಗಿತ್ತು. ಹೀಗಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಯು ಆಕಾಶ ಆಡಿಯೋ ಹಾಗೂ ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜನವರಿಯಲ್ಲಿ ನ್ಯಾಯಾಲಯವು ಮಧು ಬಂಗಾರಪ್ಪ ಅವರಿಗೆ ಜಾಮೀನು ನೀಡಿತ್ತು.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಮಧು ಬಂಗಾರಪ್ಪ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಬಾಕಿ ವೇಳೆ ಮಧು ಬಂಗಾರಪ್ಪ ಅವರು 50 ಲಕ್ಷ ರೂ.ಗಳನ್ನು ಪಾವತಿಸಲಾಗಿದ್ದು ಉಳಿದ 6,10,00,000 ರೂ.ಗಳ ಹಣವನ್ನು ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿದ್ದರು. ಆದರೆ, ನಂತರ ಅದಕ್ಕೆ ಬದ್ಧರಾಗಿರಲಿಲ್ಲ. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು, “ಈ ರೀತಿ ಮುಚ್ಚಳಿಕೆಯನ್ನು ನೀಡಿ ನಂತರ ಅದನ್ನು ಪಾಲಿಸದೆ ಇರುವ ಅಭ್ಯಾಸ ಇವರಿಗೆ ಇರುವಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಹೀಗಾಗಿ ಈಗಾಗಲೇ ಪಾವತಿ ಮಾಡಿದ 50 ಲಕ್ಷ ರೂ.ಗಳನ್ನು ಹೊರತುಪಡಿಸಬೇಕು ಎಂದು ಮಾಡಲಾದ ಕೋರಿಕೆಯನ್ನು ನಿರಾಕರಿಸಿದ ನ್ಯಾಯಾಲಯ ಒಟ್ಟು 6,96,70,000 ರೂ.ಗಳನ್ನು ಪರಿಹಾರವಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ ಪಾವತಿಸಬೇಕು ಎಂದು ಆದೇಶಿಸಿತು. ಆರೋಪಿಯ ಜಾಮೀನು ಬಾಂಡ್‌ ಮತ್ತು ಶ್ಯೂರಿಟಿ ಬಾಂಡ್‌ಗಳನ್ನು ಅದು ರದ್ದುಗೊಳಿಸಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement