ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (NC) ಪಕ್ಷಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಿದ್ದು, ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪಕ್ಷದ ಪ್ರಮುಖ ಶಿಯಾ ಮುಖಂಡ ಆಗಾ ಸೈಯದ್ ರುಹುಲ್ಲಾ ಮೆಹದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ತಂದೆ ಆಗಾ ಸೈಯದ್ ಮೆಹದಿ ಅವರ 26ನೇ ಪುಣ್ಯಸ್ಮರಣೆಯ ಅಂಗವಾಗಿ ಬುಡ್ಗಾಂನಲ್ಲಿ ನಡೆದಸಭೆಯಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದರೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗಿನ ಅವರ 24 ವರ್ಷಗಳ ಸುದೀರ್ಘ ರಾಜಕೀಯ ಸಂಬಂಧ ಅಂತ್ಯಗೊಂಡಿದೆ. ಇದಕ್ಕೂ ನಾಲ್ಕು ದಿನಗಳ ಮೊದಲು, ಅಕ್ಟೋಬರ್ 30ರಂದು ನ್ಯಾಷನಲ್ ಕಾನ್ಫರೆನ್ಸ್ನ 20ಕ್ಕೂ ಹೆಚ್ಚು ಶಾಸಕರು ಪಕ್ಷದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಆಗಾ ಸೈಯದ್ ರುಹುಲ್ಲಾ ಮೆಹದಿ ಅವರ ರಾಜೀನಾಮೆ ಘೋಷಣೆ ಬಂದಿದೆ. ಇದರಿಂದ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.
ರುಹುಲ್ಲಾ ಮೆಹದಿ ಅವರು ಕೇವಲ ರಾಜೀನಾಮೆ ಪತ್ರ ಸಲ್ಲಿಸಿ ಸುಮ್ಮನಾಗಿಲ್ಲ. ಬದಲಾಗಿ, ಪಕ್ಷದ ನಾಯಕತ್ವದ ರಾಜಕೀಯ ನಡೆ, ಸೈದ್ಧಾಂತಿಕ ನಿಲುವು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ತೋರಿದ ನಿರ್ಲಕ್ಷ್ಯದ ವಿರುದ್ಧ ನಾಲ್ಕು ಪುಟಗಳ ಸುದೀರ್ಘ ಆರೋಪ ಪಟ್ಟಿಯನ್ನೇ ಮಂಡಿಸಿದ್ದಾರೆ. 2024ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಜನರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮೇಲೆ ಇಟ್ಟಿದ್ದ ಭರವಸೆ ಈಡೇರಿಸಿಲ್ಲ. ಭಾರೀ ಜನಾದೇಶಕ್ಕೆ ಪಕ್ಷ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಹೋರಾಟ ಮುಗಿಯುತ್ತಿದ್ದಂತೆಯೇ ಪಕ್ಷ ತನ್ನ ಹಿಂದಿನ ನಿಲುವಿನಿಂದ ಸಂಪೂರ್ಣವಾಗಿ ಹಿಂದೆ ಸರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ತಮ್ಮ ರಾಜೀನಾಮೆ ಪತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಇತಿಹಾಸ, ಪ್ರಸ್ತುತ ಪರಿಸ್ಥಿತಿ ಹಾಗೂ ಭವಿಷ್ಯದ ಸವಾಲುಗಳನ್ನು ವಿವರಿಸಿದ್ದಾರೆ.
‘ನಾನು ಸೇರಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಇತಿಹಾಸ ಮತ್ತು ವರ್ತಮಾನವನ್ನು ಬೆಸೆದ ಮಾತುಗಳೊಂದಿಗೆ ನನ್ನ ಪತ್ರವನ್ನು ಆರಂಭಿಸುತ್ತೇನೆ. ನಮ್ಮ ಪ್ರದೇಶ ಮತ್ತು ಇಲ್ಲಿನ ಜನರು ಇತಿಹಾಸದ ಭಾರವನ್ನು ಹೊತ್ತುಕೊಂಡಿದ್ದಾರೆ. ಕಾಶ್ಮೀರದ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಮೇಲೆ ಆ ಇತಿಹಾಸದ ಭಾರವು ಡೆಮೊಕ್ಲೀಸ್ ಕತ್ತಿಯಂತೆ ತೂಗುತ್ತಿದೆ’ ಎಂದು ಅವರು ಬರೆದಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿ ಹಾಗೂ 35-ಎ ವಿಧಿಯನ್ನು ರದ್ದುಗೊಳಿಸಿದ್ದನ್ನು ಕಾಶ್ಮೀರಿಗಳ ಹಕ್ಕುಗಳ ಮೇಲಿನ ನಿರ್ಲಜ್ಜ ದಾಳಿ ಎಂದು ಅವರು ಬಣ್ಣಿಸಿದ್ದಾರೆ. ‘ಹಕ್ಕುಗಳೇ ಒಂದು ಜನಸಮುದಾಯದ ಅಸ್ತಿತ್ವವನ್ನು ರೂಪಿಸುತ್ತವೆ. ಹಕ್ಕುಗಳಿಲ್ಲದಿದ್ದರೆ ಆ ಜನಸಮುದಾಯದ ಅಸ್ತಿತ್ವವನ್ನೇ ಅಳಿಸಿಹಾಕಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, 2019ರ ಬೆಳವಣಿಗೆ ಕೇವಲ ಹಿನ್ನಡೆಯಾಗಿರಲಿಲ್ಲ. ರಾಜಕೀಯ ಹೋರಾಟ ಮತ್ತು ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ರಾಜಕೀಯ ನೆಲೆ ಹಾಗೂ ಅವಕಾಶವನ್ನು ಪುನರ್ಸ್ವಾಧೀನಪಡಿಸಿಕೊಳ್ಳುವ ಒಂದು ಅವಕಾಶವೂ ಆಗಿತ್ತು ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಹೋರಾಟ ಮತ್ತು ತ್ಯಾಗದ ಅಗತ್ಯವಿತ್ತು. ಈ ಹೋರಾಟವನ್ನು ನ್ಯಾಷನಲ್ ಕಾನ್ಫರೆನ್ಸ್ ಮುನ್ನಡೆಸಲಿದೆ ಎಂಬ ನಂಬಿಕೆ ತಮ್ಮದಾಗಿತ್ತು ಎಂದು ತಿಳಿಸಿದ್ದಾರೆ.
‘ನಾನು ನಿಮ್ಮನ್ನು ಸಂಪರ್ಕಿಸಿದ್ದೆ. ನೀವು ಹೋರಾಟ ನಡೆಸುವ ಭರವಸೆ ನೀಡಿದ್ದಿರಿ. ಆ ಭರವಸೆಯ ಆಧಾರದ ಮೇಲೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗೆ ನನ್ನ ರಾಜಕೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ನಮ್ಮ ಹಕ್ಕುಗಳ ಮರುಸ್ಥಾಪನೆಗಾಗಿ ಒಂದು ಚಳವಳಿಯನ್ನು ರೂಪಿಸುವುದು ಮತ್ತು ಅದಕ್ಕೆ ವೇಗ ನೀಡುವುದು ಈ ರಾಜಕೀಯ ಹೊಂದಾಣಿಕೆಯ ಹಿಂದಿನ ಆಶಯವಾಗಿತ್ತು. ಆದರೆ ದುರದೃಷ್ಟವಶಾತ್ ಅದು ಈಡೇರಲಿಲ್ಲ’ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪರವಾಗಿ ತಾವು ಅತ್ಯಂತ ಉತ್ಸಾಹದಿಂದ ಹಾಗೂ ನಿರಂತರವಾಗಿ ಪ್ರಚಾರ ನಡೆಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಜನರು ತಮ್ಮ ಆಕ್ರೋಶ ಮತ್ತು ನಿರೀಕ್ಷೆಗಳನ್ನು ಪಕ್ಷದ ಮೇಲೆ ಇರಿಸಿ ಭಾರೀ ಜನಾದೇಶ ನೀಡಿದ್ದರು. ಆದರೆ ಚುನಾವಣಾ ಪ್ರಕ್ರಿಯೆಯ ಕಾವು ಆರುವ ಮೊದಲೇ ನ್ಯಾಷನಲ್ ಕಾನ್ಫರೆನ್ಸ್ ತನ್ನ ಹಿಂದಿನ ನಿಲುವಿನಿಂದ ಸಂಪೂರ್ಣವಾಗಿ ಹಿಂದೆ ಸರಿಯಿತು ಎಂದು ಆರೋಪಿಸಿದ್ದಾರೆ.
ಇದನ್ನು ವೈಯಕ್ತಿಕವಾಗಿ ತಮಗೆ ಮಾಡಿದ ದ್ರೋಹಕ್ಕಿಂತಲೂ ಹೆಚ್ಚಾಗಿ, ಜನರ ನಿರೀಕ್ಷೆಗಳಿಗೆ ಮಾಡಿದ ದ್ರೋಹ ಎಂದು ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವೇ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನರ ಆಶಯಗಳನ್ನು ಈಡೇರಿಸುವ ಜವಾಬ್ದಾರಿಯಿಂದ ಪಕ್ಷ ಹಿಂದೆ ಸರಿದಿರುವುದು ತೀವ್ರ ನೋವು ತಂದಿದೆ ಎಂದು ತಿಳಿಸಿದ್ದಾರೆ.
‘ಹಕ್ಕುಗಳಿಗಾಗಿ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲು ಸಮರ್ಥ ಮತ್ತು ದೃಢನಿಶ್ಚಯದ ನಾಯಕತ್ವದ ಅಗತ್ಯವಿದ್ದ ಸಮಯವಿದು. ಆದರೆ ನ್ಯಾಷನಲ್ ಕಾನ್ಫರೆನ್ಸ್ ಆ ರಾಜಕೀಯ ಹೋರಾಟದ ಜಾಗವನ್ನು ತ್ಯಜಿಸಿ ಕೇವಲ ಸರ್ಕಾರ ನಡೆಸುವುದಕ್ಕೆ ಸೀಮಿತವಾಯಿತು. ಜೊತೆಗೆ, ರಾಜ್ಯದ ಸ್ಥಾನಮಾನ ಮರುಸ್ಥಾಪನೆಯಾಗಲಿದೆ ಎಂಬ ಅಸ್ಪಷ್ಟ ಮತ್ತು ನಿರರ್ಥಕ ಭರವಸೆಯನ್ನಷ್ಟೇ ಮುಂದಿಟ್ಟುಕೊಂಡಿತು’ ಎಂದು ಅವರು ಪಕ್ಷದ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಚಾರಗಳ ಬಗ್ಗೆ ಪಕ್ಷದೊಳಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗ ಭಿನ್ನಾಭಿಪ್ರಾಯಗಳು ತಲೆದೋರಿದವು. ಗಾಯದ ಮೇಲೆ ಬರೆ ಎಳೆದಂತೆ, ಪಕ್ಷವು ಸಂಪೂರ್ಣವಾಗಿ ರಾಜಕೀಯ ಹೋರಾಟದಿಂದ ಹಿಂದೆ ಸರಿಯುವ ನಿಲುವಿಗೆ ತನ್ನನ್ನು ತಾನು ಹೊಂದಿಸಿಕೊಂಡಿತು ಎಂದು ಅವರು ಆರೋಪಿಸಿದ್ದಾರೆ.
‘ನಾವು ಕಾಶ್ಮೀರದ ಜನರು ಪ್ರಸ್ತುತ ಹಲವು ಬಗೆಯ ಪರಿವರ್ತನೆಗಳ ನಡುವಿನ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಜನರನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸುವುದು ಮತ್ತು ರಾಜಕೀಯ ಹೋರಾಟದಿಂದ ಹಿಂದೆ ಸರಿಯುವುದು ಜಮ್ಮು ಮತ್ತು ಕಾಶ್ಮೀರದ ಜನರ ಅಸ್ತಿತ್ವವನ್ನು ದುರ್ಬಲಗೊಳಿಸುವ ಪ್ರಕ್ರಿಯೆಗೆ ಸಹಾಯ ಮಾಡಿದಂತಾಗುತ್ತದೆ. ಇಂತಹ ಪ್ರಕ್ರಿಯೆಯ ಭಾಗವಾಗಿ ನಾನು ಇರಲು ಸಾಧ್ಯವಿಲ್ಲ; ಇರಲೂ ಬಯಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ವ್ಯವಸ್ಥೆಯ ಸಮರ್ಪಕ ಮರುಹೊಂದಾಣಿಕೆ, ರಾಜಕೀಯ ಕೈದಿಗಳ ಬಿಡುಗಡೆ ಹಾಗೂ ಸಂವಿಧಾನದ 370ನೇ ವಿಧಿಯ ಮರುಸ್ಥಾಪನೆ ಸೇರಿದಂತೆ ಹಲವು ಮಹತ್ವದ ವಿಷಯಗಳಲ್ಲಿ ರುಹುಲ್ಲಾ ಮೆಹದಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಆದರೆ ಈ ವಿಚಾರಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತೋರಿದ ನಿಷ್ಕ್ರಿಯತೆ ಹಾಗೂ ತಮ್ಮ ಮತ್ತು ಪಕ್ಷದ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ರಾಜೀನಾಮೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದ ಕೊನೆಯಲ್ಲಿ ತಮ್ಮ ಮುಂದಿನ ರಾಜಕೀಯ ನಿಲುವನ್ನು ಪ್ರಕಟಿಸಿರುವ ಅವರು, ಇಲ್ಲಿಯವರೆಗಿನ ರಾಜಕೀಯ ಪಯಣಕ್ಕಾಗಿ ಪಕ್ಷಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಇನ್ನು ಮುಂದೆ ಈ ಸಂಬಂಧ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ರಾಜಕೀಯ ವೇದಿಕೆ?
ರುಹುಲ್ಲಾ ಮೆಹದಿ ಅವರ ಮುಂದಿನ ರಾಜಕೀಯ ನಡೆ ಕುರಿತು ಕುತೂಹಲ ಮೂಡಿದೆ. ಅವರ ಆಪ್ತ ಮೂಲಗಳ ಪ್ರಕಾರ, ಸದ್ಯಕ್ಕೆ ಅವರು ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಉದ್ದೇಶ ಹೊಂದಿಲ್ಲ. ಬದಲಾಗಿ, ಯುವಜನರ ನೇತೃತ್ವದಲ್ಲಿ ಹೊಸ ರಾಜಕೀಯ ಸಾಮೂಹಿಕ ವೇದಿಕೆಯೊಂದನ್ನು ರೂಪಿಸುವ ಯೋಜನೆ ಹೊಂದಿದ್ದಾರೆ.
ಒಟ್ಟಿನಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಮುಖ ಶಿಯಾ ಮುಖಂಡ ಹಾಗೂ ಶ್ರೀನಗರದ ಸಂಸದರಾಗಿದ್ದ ಆಗಾ ಸೈಯದ್ ರುಹುಲ್ಲಾ ಮೆಹದಿ ಅವರ ರಾಜೀನಾಮೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ. 2024ರ ಜನಾದೇಶದ ಬಳಿಕ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಹೊರಬಂದಿರುವ ಅವರ ಮುಂದಿನ ನಡೆ ಕಾಶ್ಮೀರದ ರಾಜಕೀಯ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಈಗಿನ ಕುತೂಹಲ.


ನಿಮ್ಮ ಕಾಮೆಂಟ್ ಬರೆಯಿರಿ