ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ನೋಟಿಸ್‌ಗೆ ಬೆಲೆ ನೀಡಿ ರೇವಣ್ಣ ಅವರು ತನಿಖೆಗೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನಿನಂತೆ ಅವರನ್ನು ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಕಲಬುರಗಿ ನಗರ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತೇ ನಮ್ಮ ಕಡೆ ನೋಡುವಂತಹ ಅಪರಾಧಿಕ ಕೃತ್ಯ ಹಾಸನದಲ್ಲಿ ನಡೆದಿದೆ. ಅದರ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಈವರೆಗೆ ಇಬ್ಬರು ಮಹಿಳೆಯರು ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಹಿಳೆಯೊಬ್ಬರು ಪ್ರಜ್ವಲ್ ವಿರುದ್ಧ ದೂರು ದಾಖಲು ಮಾಡುವ ಬಗ್ಗೆ ಗೊತ್ತಾದ ನಂತರವೇ ಅವರು ರಾಜತಾಂತ್ರಿಕ ವೀಸಾ ಮೇಲೆ ದೇಶ ಬಿಟ್ಟು ಹೋಗಿದ್ದಾರೆ. ಅವರು ಎಲ್ಲೇ ಇದ್ದರೂ ಹಿಡಿದು ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಈಗಾಗಲೇ ಮುಖ್ಯಮಂತ್ರಿಗಳು ಪ್ರಜ್ವಲ್‌ ಅವರ ರಾಯಭಾರಿ ವೀಸಾ ರದ್ದು ಮಾಡುವಂತೆ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ. ಎಲ್ಲೆಡೆ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ನೂರಾರು ಮಹಿಳೆಯರು ಸಂತ್ರಸ್ತರಾಗಿರುವ ಅನುಮಾನ ಇದೆ. ಆದರೆ, ಯಾರೂ ಕೂಡ ಹೆದರದೆ ಎಸ್‌ಐಟಿ ತನಿಖೆಯಲ್ಲಿ ಸಹಕಾರ ನೀಡಬೇಕು. ಮಹಿಳೆಯರು ಸ್ವ ಇಚ್ಛೆಯಿಂದ ಹೇಳಿಕೆ ನೀಡಿದರೆ ಮಾತ್ರ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತದೆ. ಒತ್ತಾಯದ ಹೇಳಿಕೆ ದಾಖಲು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement