ಕೆಆರ್‌ಎಸ್‌ ಅಣೆಕಟ್ಟು ಸುತ್ತಮುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ : ಹೈಕೋರ್ಟ್‌ ಆದೇಶ

ಬೆಂಗಳೂರು : ಕೃಷ್ಣರಾಜ ಸಾಗರ ಜಲಾಶಯದ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ/ಕ್ವಾರಿ ಚಟುವಟಿಕೆಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
ಗಣಿಗಾರಿಕೆಗೆ ಪರವಾನಗಿ ನೀಡಲು ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿದ ಹಾನಿಯ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನು ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿ.ಜಿ. ಕುಮಾರ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಜಲಾಶಯ ಸುರಕ್ಷತಾ ಕಾಯಿದೆ 2021 ನಿಬಂಧನೆಗಳ ಅಡಿ ಶತಮಾನಕ್ಕೂ ಹಳೆಯದಾದ ಜಲಾಶಯದ ಸುರಕ್ಷತೆ ಕುರಿತು ಈ ಆದೇಶ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಆದೇಶ ಹೊರಡಿಸುವಂತೆ ಜಿಲ್ಲಾಡಳಿತ ಮತ್ತು ಗಣಿಗಾರಿಕೆ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿದ್ದು, ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೈಕೋರ್ಟ್‌ ಹೇಳಿದೆ.

ಕಾವೇರಿ ನೀರಾವರಿ ನಿಗಮ ನಡೆಸಿದ ಪರೀಕ್ಷಾರ್ಥ ಸ್ಫೋಟ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳುವ ನಿರ್ಧಾರವನ್ನು ಅರ್ಜಿದಾರರು ಪಾಲಿಸಬೇಕು. ಪರೀಕ್ಷಾರ್ಥ ವರದಿ ಸ್ವೀಕಾರವಾಗುವವರೆಗೆ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಲು ಅರ್ಜಿದಾರರಿಗೆ ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಲ್‌ ಚಿದಾನಂದಯ್ಯ ಅವರು ಕ್ವಾರಿ ಚಟುವಟಿಕೆ ಅಥವಾ ಸ್ಫೋಟ ಚಟುವಟಿಕೆ ನಡೆಸಲು ಅನುಮತಿಸಬೇಕು. ಎಂದು ಕೋರಿದರು.
ಇದಕ್ಕೆ ಮುಖ್ಯ ನ್ಯಾಯಮೂರ್ತಿ ಅವರು ಸ್ಫೋಟ ನಡೆಸದೇ ಗಣಿಗಾರಿಕೆಗೆ ಅನುಮತಿ ನೀಡುವುದು ಕೆಆರ್‌ಎಸ್ ಜಲಾಶಯ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕ ಮತ್ತು ಸಂಬಂಧಿತ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ” ಎಂದರು.
ಅಮಿಕಸ್‌ ಕ್ಯೂರಿ ಆದಿತ್ಯ ಸೋಂಧಿ ಅವರು “ಕಾನೂನಿನ ಪ್ರಕಾರ ಜಲಾಶಯ ಸುರಕ್ಷತಾ ರಾಜ್ಯ ಸಮಿತಿಯು ಕೆಆರ್‌ಎಸ್‌ ಮೇಲೆ ನಿಗಾ ಇಡಬೇಕು” ಎಂದರು. ಇದಕ್ಕೆ ಪೀಠ ಸಹಮತ ವ್ಯಕ್ತಪಡಿಸಿತು.

ಪ್ರಮುಖ ಸುದ್ದಿ :-   ನಾಳೆ (ಮೇ21) ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ; 4 ಜಿಲ್ಲೆಗಳಿಗೆ ರೆಡ್ ಅಲರ್ಟ್‌, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement