ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದೂರು ದಾಖಲು

ಬೆಂಗಳೂರು: ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಚಿವ ದಿನೇಶ ಗುಂಡೂರಾವ್ ಕುಟುಂಬದವರನ್ನು ಅವಮಾನಿಸಿರುವ ಶಾಸಕ ಯತ್ನಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಿಜೆಪಿ ಕಾರ್ಯಕರ್ತನನ್ನು ಸಮರ್ಥನೆ ಮಾಡುವ ವೇಳೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವೇ ಇದೆ, ದೇಶ ವಿರೋಧಿ ಹೇಳಿಕೆ ನೀಡುವುದು ಅವರ ಚಟವಾಗಿದೆ ಎಂದು ಯತ್ನಾಳ ಹೇಳಿದ್ದಾರೆ. ಈ ಮೂಲಕ ಸಚಿವರ ಇಡೀ ಕುಟುಂಬಕ್ಕೆ ಅವಹೇಳನ ಮಾಡಿದ್ದಾರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಚುನಾವಣೆ ಹೊತ್ತಲ್ಲಿ‌ ಕೋಮು ಸೌಹಾರ್ದ ಹಾಳು ಮಾಡಲು, ಸಚಿವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿತ್ತು. ಈ ಬಗ್ಗೆ ದಿನೇಶ ಗುಂಡೂರಾವ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಎನ್ನುವಂತೆ ಮಾತನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್‌ಐಎ (NIA) ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಬಿಜೆಪಿಯು ಇದಕ್ಕೇನು ಹೇಳುತ್ತದೆ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರಿಸಿದ ರಾಜ್ಯ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.

ಪ್ರಮುಖ ಸುದ್ದಿ :-   ಶಿವಮೊಗ್ಗ : ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರ ಬರ್ಬರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement