ಬೆಂಗಳೂರು: ಸಿಲಿಕಾನ್ ಸಿಟಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 34 ವರ್ಷದ ಯುವತಿಯೊಬ್ಬಳು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಜಾರ್ಖಂಡ್‌ನ ಧನ್‌ಬಾದ್ ಮೂಲದ ಪೂಜಾ ದತ್ತಾ ಎಂದು ಗುರುತಿಸಲಾಗಿದೆ. ಪೂಜಾ ದತ್ತಾ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಇವರು ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಒಬ್ಬರೇ ವಾಸವಿದ್ದರು. ಸೋಮವಾರ ಪೂಜಾ ಅವರ ಮನೆಯಿಂದ ವಿಪರೀತ ದುರ್ನಾತ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ, ಪೂಜಾ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಶವವು ಅರ್ಧದಷ್ಟು ಕೊಳೆತ ಸ್ಥಿತಿಯಲ್ಲಿದ್ದು, ಘಟನೆ ನಡೆದು ಕನಿಷ್ಠ 2-3 ದಿನಗಳಾಗಿರಬಹುದು ಎಂದು ವಿಧಿವಿಜ್ಞಾನ ತಜ್ಞರು ಅಂದಾಜಿಸಿದ್ದಾರೆ.
ಪೂಜಾ ಅವರು ಕೊನೆಯದಾಗಿ ಏಪ್ರಿಲ್ 23 ರಂದು ದಿನಸಿ ಖರೀದಿಸಲು ಹೊರಬಂದಾಗ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ. ಮನೆಯೊಳಗೆ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಆದರೆ, ಹರಿದು ಹಾಕಲಾದ ಕಾಗದದ ತುಣುಕುಗಳು ಮನೆಯಲ್ಲೆಲ್ಲಾ ಹರಡಿಕೊಂಡಿದ್ದವು.
ಬಾಗಿಲು ಒಳಗಿನಿಂದ ಲಾಕ್ ಆಗಿರುವುದರಿಂದ ಇದು ಆತ್ಮಹತ್ಯೆ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಮೃತದೇಹ ಬಿದ್ದಿದ್ದ ಸ್ಥಿತಿ ಮತ್ತು ರಕ್ತದ ಮಡುವನ್ನು ಗಮನಿಸಿದರೆ ಕೊಲೆಯ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮನೆಯಲ್ಲಿ ಸಿಕ್ಕಿರುವ ಹರಿದ ಕಾಗದದ ತುಣುಕುಗಳು ಮತ್ತು ಸಾವಿನ ಸಂದರ್ಭದ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಹೆಚ್ಚಿನ ಮಾಹಿತಿ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ