ನವದೆಹಲಿ: 250ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಿದೆ.
ಎಲ್ಲಾ ಮೂವರು ಉದ್ಯೋಗಿಗಳನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 ರ ಅಡಿಯಲ್ಲಿ ಬಂಧಿಸಲಾಗಿದೆ.
ಅರುಣಕುಮಾರ ಮಹಾಂತ (ಹಿರಿಯ ವಿಭಾಗ ಎಂಜಿನಿಯರ್), ಎಂ.ಡಿ. ಅಮೀರ್ ಖಾನ್ (ಕಿರಿಯ ವಿಭಾಗ ಎಂಜಿನಿಯರ್) ಮತ್ತು ಪಾಪುಕುಮಾರ (ತಂತ್ರಜ್ಞ) ಬಂಧಿತ ಆರೋಪಿಗಳು.
ಅರುಣಕುಮಾರ ಮಹಾಂತ ಅವರು ತನಿಖಾ ಸಮಿತಿಯ ಸದಸ್ಯರಾಗಿದ್ದರು, ಅವರು ಮೊದಲ ಪ್ರಾಥಮಿಕ ತಪಾಸಣಾ ವರದಿಯನ್ನು ಬರೆದರು ಮತ್ತು ನಂತರ ತಪಾಸಣಾ ವರದಿಯ ಬಗ್ಗೆ ಅಸಮ್ಮತಿ ಟಿಪ್ಪಣಿ ಬರೆದರು. ಅಪರಾಧದ ಸಾಕ್ಷ್ಯಾಧಾರಗಳನ್ನು ನಾಪತ್ತೆ ಮಾಡಿದ್ದಕ್ಕಾಗಿ ಸಿಬಿಐ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 201 ರ ಆರೋಪವನ್ನೂ ಹೊರಿಸಿದೆ.ಜೂನ್ 6 ರಂದು ಒಡಿಶಾದ ಬಾಲಸೋರ್ ರೈಲು ಅಪಘಾತದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ ಅಧಿಕೃತವಾಗಿ ವಹಿಸಿಕೊಂಡಿದೆ.
ಜೂನ್ 2 ರಂದು ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ 278 ಜನರು ಸಾವಿಗೀಡಾಗಿದ್ದರು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದ “ಮೂಲ ಕಾರಣ” ಮತ್ತು “ಅಪರಾಧ” ಕೃತ್ಯದ ಹಿಂದಿನ ಜನರನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಹೇಳಿದ ವಾರಗಳ ನಂತರ ಬಂಧನವಾಗಿದೆ.
ವಿಧ್ವಂಸಕತೆಯ ಬಗ್ಗೆ ರೈಲ್ವೆ ಸುಳಿವು
ರೈಲುಗಳ ಉಪಸ್ಥಿತಿಯನ್ನು ಪತ್ತೆ ಹಚ್ಚುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಹಾಳುಮಾಡುವುದು ಮತ್ತು ವಿಧ್ವಂಸಕ ಕೃತ್ಯಗಳು ಅಪಘಾತಕ್ಕೆ ಕಾರಣವಾಗಬಹುದು ಎಂದು ರೈಲ್ವೆ ಅಧಿಕಾರಿಗಳು ಸೂಚಿಸಿದ್ದಾರೆ.
ಅಲ್ಲದೆ, ಕಮಿಷನರ್ ರೈಲ್ವೆ ಸುರಕ್ಷತೆ (ಸಿಆರ್‌ಎಸ್)ಯ ಇತ್ತೀಚಿನ ವರದಿಯು ವಿನಾಶಕಾರಿ ಅಪಘಾತದ ಹಿಂದಿನ ಕಾರಣ ಮಾನವ ದೋಷಗಳನ್ನು ಎತ್ತಿ ತೋರಿಸಿದೆ. ಮುನ್ನೆಚ್ಚರಿಕೆ ವರದಿ ಮಾಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ವರದಿಯು ಸೂಚಿಸಿದೆ, ಅದು “ಬಹು ಹಂತಗಳಲ್ಲಿ ಲೋಪಗಳು” ನಡೆದಿವೆ ಎಂದು ಹೇಳಿದೆ.
ಅ ನಿಲ್ದಾಣದಲ್ಲಿ ನಡೆಸಲಾದ “ಸಿಗ್ನಲಿಂಗ್-ಸರ್ಕ್ಯೂಟ್-ಆಲ್ಟರೇಶನ್” ಪ್ರಕ್ರಿಯೆಯಲ್ಲಿನ ಲೋಪದಿಂದಾಗಿ ಕೊರೊಮೊಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಹಿಂಬದಿಯಿಂದ ಡಿಕ್ಕಿ ಸಂಭವಿಸಿದೆ ಎಂದು ವರದಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ