ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಜಾಮೀನು ರದ್ದತಿಗೆ ಸುಪ್ರೀಂಕೋರ್ಟ್‌ ನಕಾರ

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್‌, ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.
ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್‌ ಮಹದೇವನ್‌ ಅವರ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ “ರೇಣುಕಾಸ್ವಾಮಿ ಕೊಲೆಯು ಆಘಾತಕಾರಿ ಪ್ರಕರಣವಾಗಿದ್ದು, ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದರು. ಆಗ ನ್ಯಾ. ಪರ್ದಿವಾಲಾ ಅವರು “ಜಾಮೀನು ರದ್ದುಪಡಿಸಬೇಕು ಎಂದು ಕೇಳುತ್ತಿದ್ದೀರಾ?” ಎಂದು ಕೇಳಿದರು. ಇದಕ್ಕೆ ಲೂಥ್ರಾ ಅವರು “ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಹೈಕೋರ್ಟ್‌ ಯಾವುದನ್ನೂ ಪರಿಗಣಿಸಿಲ್ಲ. ಪ್ರಕರಣದಲ್ಲಿನ ಸಹ ಆರೋಪಿಗಳು ಹೈಕೋರ್ಟ್‌ನ ಈ ತೀರ್ಮಾನಗಳನ್ನು ಆಧಾರವಾಗಿಸಿಕೊಂಡು ಜಾಮೀನು ಪಡೆಯಲು ಅನುಮತಿಸಬಾರದು ಎಂದರು.

ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

ಆಗ ಪೀಠವು “ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರವು ಜಾಮೀನು ರದ್ದತಿ ಕೋರಿದ್ದು, ಹೈಕೋರ್ಟ್‌ ಕೆಲವು ಆರೋಪಿಗಳಿಗೆ ಜಾಮೀನು ನೀಡುವಾಗ ಸುದೀರ್ಘವಾದ ತೀರ್ಪು ಪ್ರಕಟಿಸಿದೆ. ಹೈಕೋರ್ಟ್‌ ಆದೇಶದಲ್ಲಿ ದಾಖಲಿಸಿರುವ ತೀರ್ಮಾನಗಳನ್ನು ಬಳಕೆ ಮಾಡಿಕೊಂಡು ಇತರೆ ಆರೋಪಿಗಳು ಜಾಮೀನು ಪಡೆಯಲು ಅನುಮತಿಸಬಾರದು ಎಂದು ರಾಜ್ಯ ಸರ್ಕಾರ ಕೋರಿದೆ. ರಾಜ್ಯ ಸರ್ಕಾರವು ಜಾಮೀನು ರದ್ದತಿ ಕೋರುತ್ತಿರುವುದರಿಂದ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡುವುದು ಸೂಕ್ತವಲ್ಲ. ಪ್ರಾಸಿಕ್ಯೂಷನ್‌ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಪ್ರಕರಣದಲ್ಲಿ ಬೇರೆ ಯಾವುದೇ ಆರೋಪಿ ಜಾಮೀನು ಕೋರಿದರೆ ಸಕ್ಷಮ ನ್ಯಾಯಾಲಯವು ಹೈಕೋರ್ಟ್‌ನ ಆಕ್ಷೇಪಾರ್ಹ ಆದೇಶವನ್ನು ಆಧರಿಸಬಾರದು. ಪ್ರಕರಣದಲ್ಲಿನ ಬೇರೆ ಯಾವುದೇ ಆರೋಪಿಯು ಭವಿಷ್ಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಅದನ್ನು ಮೆರಿಟ್‌ ಮೇಲೆ ನಿರ್ಧರಿಸಬೇಕು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement