ನವದೆಹಲಿ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜೂನ್ 18ರಂದು ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
ಈ ಸಂಬಂಧ ಐಎಂಎ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದು, ಸ್ಥಳೀಯ ಎನ್ ಜಿಒ ಗಳು, ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಯಕರನ್ನೂ ಭೇಟಿ ಮಾಡುವುದಾಗಿ ತಿಳಿಸಿದೆ. ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ಇತರ ಪ್ರದೇಶಗಳಲ್ಲಿ ಕಳೆದ 2 ವಾರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಅತ್ಯಂತ ಆತಂಕಕಾರಿಯಾಗಿದೆ ಎಂದು ಅದು ಹೇಳಿದೆ.
ಆಸ್ಪತ್ರೆ ಮತ್ತು ಅರೋಗ್ಯ ಸೇವೆ ವೃತ್ತಿಪರರ ಸಂರಕ್ಷಣಾ ಕಾಯ್ದೆ ಐಪಿಸಿ ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಜಾರಿಗೆ ತರಬೇಕೆಂದು ಐಎಂಎ ಆಗ್ರಹಿಸಿದ್ದು, ಆಸ್ಪತ್ರೆಗಳನ್ನು ಸಂರಕ್ಷಿತ ವಲಯಗಳೆಂದು ಘೋಷಿಸಬೇಕೆಂದೂ ಹೇಳಿದೆ.
ಬಾಬಾ ರಾಮ್ ದೇವ್ ಸಾರ್ವಜನಿಕವಾಗಿ ಹೊಸ ಹೇಳಿಕೆಯನ್ನು ನೀಡಿದ್ದು, ವೈದ್ಯರು ದೇವದೂತರೆಂದು ಬಣ್ಣಿಸಿದ್ದಾರೆ. ಅಂತೆಯೇ ತಾವೂ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅವರು ತಮ್ಮ ಹೇಳಿಕೆ ಮೂಲಕ ನಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಐಎಂಎ ಹೇಳಿದೆ.
ರಕ್ಷಕರನ್ನು ರಕ್ಷಿಸಿ ಎಂಬ ಘೋಷ ವಾಕ್ಯದ ಅಡಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ. ಕಪ್ಪು ಬ್ಯಾಡ್ಜ್, ಮಾಸ್ಕ್, ರಿಬ್ಬನ್, ಶರ್ಟ್ ಧರಿಸಿ, ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆಯ ಬಗ್ಗೆ ಅರಿವು ಅಭಿಯಾನ ಮಾಡುವುಂತೆ ಕರೆ ನೀಡಲಾಗಿದೆ.
ಜೂ.15 ನ್ನು ರಾಷ್ಟ್ರೀಯ ಬೇಡಿಕೆ ದಿನ ಎಂದು ಆಚರಿಸಲು ಐಎಂಎ ನಿರ್ಧರಿಸಿದ್ದು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆ ವಿಷಯವಾಗಿ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ