ಸಾಕ್ಷಿಗಳ ವಿಚಾರಣೆ ಪೂರ್ಣ : ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಶಿವಮೂರ್ತಿ ಶರಣರು

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯರು ಹಾಗೂ ಪ್ರಮುಖ‌ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಮುರುಘಾ ಮಠದ ಶಿವಮೂರ್ತಿ ಶರಣರು ಸೋಮವಾರ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು.
ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ, ಇಬ್ಬರು ಸಂತ್ರಸ್ತೆಯರು ಸೇರಿದಂತೆ ಒಟ್ಟು 13 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರ ಜಾಮೀನಿಗೆ ಸುಪ್ರೀಂ ಕೋರ್ಟ್‌ ನೀಡಿದ್ದ ತಡೆ ತೆರವುಗೊಂಡಿದೆ ಎಂದು 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಚನ್ನಬಸಪ್ಪ ಹಡಪದ ಆದೇಶಿಸಿದರು. ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಶರಣರು ಸೋಮವಾರ ಸಂಜೆ ಕಾರಾಗೃಹದಿಂದ ಹೊರಬಂದರು.
ಪೋಕ್ಸೊ ಪ್ರಕರಣದಲ್ಲಿ 2023ರ ನ.8ರಂದು ಹೈಕೋರ್ಟ್ ಮುರುಘಾ ಶಿವಮೂರ್ತಿ ಶರಣರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ನಂತರ ಪೋಕ್ಸೊದ 2ನೇ ಪ್ರಕರಣದಲ್ಲಿ ಅವರು ಮತ್ತೆ ಬಂಧನಕ್ಕೊಳಗಾದರು. ನಂತರ ಅವರ ಜಾಮೀನು ಅರ್ಜಿ ಪರಿಗಣಿಸಿದ್ದ ಹೈಕೋರ್ಟ್‌ ನ.20ರಂದು ಅವರ ಬಿಡುಗಡೆಗೆ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಸಂತ್ರಸ್ತೆಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ ಜಾಮೀನಿಗೆ ತಡೆ ನೀಡಿತ್ತು. ವಾರದೊಳಗೆ ನ್ಯಾಯಾಲಯದ ಎದುರು ಶರಣಾಗುವಂತೆ ಶರಣರಿಗೆ ಸೂಚಿಸಿತ್ತು. ಅದರಂತೆ ಮೇ 27ರಂದು ಅವರು ಶರಣಾಗಿದ್ದರು.

ಪ್ರಮುಖ ಸುದ್ದಿ :-   ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡ ಯುವಕ; ವೀಡಿಯೊ ಮಾಡಿಟ್ಟು ಆತ್ಮಹತ್ಯೆ

ಸಂತ್ರಸ್ತೆಯರು ಹಾಗೂ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯುವ ವರೆಗೂ ಆರೋಪಿ ನ್ಯಾಯಾಂಗ ಬಂಧನ ದಲ್ಲಿರಬೇಕು. ಜೊತೆಗೆ ವಿಚಾರಣೆಯನ್ನು 4 ತಿಂಗಳೊಳಗೆ ಪೂರ್ಣಗೊಳಿಸಬೇಕು. ಅಷ್ಟರಲ್ಲಿ ಸಾಧ್ಯವಾಗದಿದ್ದರೆ 2 ತಿಂಗಳು ಹೆಚ್ಚುವರಿಯಾಗಿ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. 130 ದಿನದೊಳಗೆ ಸಂತ್ರಸ್ತೆಯರು ಹಾಗೂ ಸಾಕ್ಷಿಗಳ ವಿಚಾರಣೆ ಪೂರ್ಣ ಗೊಂಡಿದೆ. ಇದನ್ನು ಪರಿಗಣಿಸಿ ಸ್ವಾಮೀಜಿ ಬಿಡುಗಡೆಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಬಿಡುಗಡೆಗೆ ಆದೇಶಿಸಿದರು.
ಹೈಕೋರ್ಟ್‌ ಆದೇಶದಂತೆ ಶರಣರಿಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಲು ಅವಕಾಶವಿಲ್ಲ. ಹೀಗಾಗಿ ಅವರು ದಾವಣಗೆರೆ ಶಿವಯೋಗ ಆಶ್ರಮದತ್ತ ತೆರಳಿದರು.
ಕಾರಾಗೃಹದಿಂದ ಹೊರಬಂದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೂರ್ತಿ ಶರಣರು, ‘ಬಸವೇಶ, ಮುರುಘೇಶನ ಆಶೀರ್ವಾದದಿಂದ ಬಿಡುಗಡೆಯಾಗಿದ್ದೇವೆ. ಎಲ್ಲ ಪ್ರಕರಣಗಳ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಇದು ಮಾತನಾಡುವ ಕಾಲವಲ್ಲ, ಮೌನ ವಹಿಸುವಂತಹ ಕಾಲ. ವಿಚಾರ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement