ನವದೆಹಲಿ: 2025-26ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರ ಭಾನುವಾರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಬಜೆಟ್‌ಗೆ ಮುನ್ನ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಮಂಡಿಸಲಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28ರಿಂದ ಪ್ರಾರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೊದಲ ಹಂತದ ಬಜೆಟ್ ಅಧಿವೇಶನ ಫೆಬ್ರವರಿ 13ರಂದು ಮುಕ್ತಾಯವಾಗಲಿದೆ. ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 9 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು 2026ರ ಬಜೆಟ್ ಅಧಿವೇಶನಕ್ಕೆ ಅನುಮೋದನೆ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಭಾನುವಾರ ರಜೆ ಇರುತ್ತದೆ, ಆದರೆ ಈ ಬಾರಿ ಫೆಬ್ರವರಿ 1 ಭಾನುವಾರ ಬಂದಿದ್ದರೂ ಬಜೆಟ್ ಮಂಡನೆಯಾಗುತ್ತಿದೆ. ಈ ಹಿಂದೆ 2020ರ ಕೋವಿಡ್ ಸಮಯದಲ್ಲಿ ಮತ್ತು 2012ರಲ್ಲಿ ಸಂಸತ್ತಿನ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾನುವಾರ ಅಧಿವೇಶನ ನಡೆಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ