ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ; ರಾಜಕೀಯ ಹಿನ್ನಡೆಯೋ ಅಥವಾ ಲೆಕ್ಕಾಚಾರದ ನಡೆಯೋ..?

ಉನ್ನತ ಮಟ್ಟದ ರಾಜಕೀಯ ತಂತ್ರಗಳಲ್ಲಿ ಸಮಯದ ಆಯ್ಕೆ ಎಂದಿಗೂ ಆಕಸ್ಮಿಕವಾಗಿರುವುದಿಲ್ಲ. ಅದೇ ರೀತಿ ಅಧಿಕಾರದ ಸ್ಥಾನದಿಂದ ಹಿಂದೆ ಸರಿಯುವ ನಿರ್ಧಾರಗಳೂ ಬಹುತೇಕ ದೊಡ್ಡ ರಾಜಕೀಯ ಲೆಕ್ಕಾಚಾರದ ಭಾಗವಾಗಿರುತ್ತವೆ. ಶನಿವಾರ (ಜುಲೈ 25) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀನಾಮೆ ಸಲ್ಲಿಸಿ, “ನನ್ನ ಯುವ ಸ್ನೇಹಿತರಿಗೆ” ಉದ್ದೇಶಿಸಿದ ಎರಡು ಪುಟಗಳ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದು ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಿಂದ ಉಂಟಾದ ಜನಾಕ್ರೋಶದ ನಡುವೆಯೇ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಬೆಳವಣಿಗೆಯಂತೆ ಕಾಣಬಹುದು. ಆದರೆ ರಾಜಕೀಯ ವಿಶ್ಲೇಷಕರ ದೃಷ್ಟಿಯಲ್ಲಿ ಈ ನಿರ್ಧಾರದ ಸಮಯ, ಅದರ ಹಿನ್ನೆಲೆ ಮತ್ತು ಮುಂದಿನ ಸಾಧ್ಯತೆಗಳನ್ನು ಗಮನಿಸಿದರೆ, ಇದು ಕೇವಲ ರಾಜೀನಾಮೆಯಲ್ಲ; ಬಹುಶಃ ವಿಶಾಲ ರಾಜಕೀಯ ತಂತ್ರದ ಭಾಗವಾಗಿರಬಹುದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ರಾಜಕೀಯದಲ್ಲಿ ಕೆಲವೊಮ್ಮೆ ವಿರೋಧಿಗಳ ದಾಳಿಯ ಕೇಂದ್ರಬಿಂದು ಒಬ್ಬ ವ್ಯಕ್ತಿಯ ಸುತ್ತ ಕೇಂದ್ರೀಕೃತವಾದಾಗ, ಆ ಸ್ಥಾನವನ್ನು ನಿರಂತರವಾಗಿ ರಕ್ಷಿಸುವುದಕ್ಕಿಂತ ಅದನ್ನೇ ರಾಜಕೀಯ ಅಂಗಳದಿಂದ ತೆಗೆಯುವುದು ಹೆಚ್ಚು ಪರಿಣಾಮಕಾರಿ ತಂತ್ರವಾಗುತ್ತದೆ. ಆಗ ಎದುರಾಳಿಗಳ ಆಂದೋಲನ ಅಥವಾ ದಾಳಿಗೆ ನಿರ್ದಿಷ್ಟ ಟಾರ್ಗೆಟ್‌ ಉಳಿಯುವುದಿಲ್ಲ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳು ಮತ್ತು ರಾಜಕೀಯ ಒತ್ತಡಗಳು ಒಂದು ಪ್ರಮುಖ ಬೇಡಿಕೆಯ ಸುತ್ತ ಕೇಂದ್ರೀಕೃತವಾಗಿದ್ದವು. ಅದೆಂದರೆ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂಬುದು.

ಆದರೆ ಮರುಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮತ್ತು ಜುಲೈ 16ರಂದು ಫಲಿತಾಂಶ ಪ್ರಕಟವಾಗುವವರೆಗೆ ಪ್ರಧಾನ್ ತಮ್ಮ ಹುದ್ದೆಯಲ್ಲಿ ಮುಂದುವರಿದರು. ಸರ್ಕಾರಕ್ಕೆ ತುರ್ತು ಆಡಳಿತಾತ್ಮಕ ಕರ್ತವ್ಯಗಳನ್ನು ಮೊದಲು ಪೂರ್ಣಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಅವಕಾಶ ದೊರೆಯುವ ಕಾರಣಕ್ಕೆ ಸರ್ಕಾರ ಎಷ್ಟೇ ಒತ್ತಡ ಬಂದರೂ ಶಿಕ್ಷಣ ಸಚಿವ ಸ್ಥಾನದಿಂದ ಅವರನ್ನು ತಕ್ಷಣ ತೆಗೆಯಲಿಲ್ಲ.
ಶೈಕ್ಷಣಿಕ ಹಾಗೂ ರಾಜಕೀಯ — ಎರಡೂ ಆಯಾಮಗಳಲ್ಲಿ ಅವರ ನಿರ್ಗಮನದ ಸಮಯ ಗಮನಾರ್ಹವಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ್ದ ಈ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ ಪುನಃನಡೆಸುವುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಉಂಟಾದ ಆಕ್ರೋಶದ ಜೊತೆಗೆ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಖಿನ್ನತೆ ಮತ್ತು ಕೆಲವು ಆತ್ಮಹತ್ಯೆಗಳಂತಹ ದುರಂತ ಘಟನೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸೂಕ್ಷ್ಮವಾಗಿಸಿತ್ತು. ಈ ಹಿನ್ನೆಲೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷೆ ನಡೆಸುವುದು ಸರ್ಕಾರದ ವಿಶ್ವಾಸಾರ್ಹತೆಯ ಪರೀಕ್ಷೆಯಾಗಿತ್ತು. ಇದು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮೊದಲು ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ ನೀಡಿ ನಂತರ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವ ಮಾದರಿಯನ್ನು ಹೋಲುತ್ತಿತ್ತು.

ಸಿಜೆಪಿಯ ಉದಯ ಮತ್ತು ಬದಲಾದ ಸನ್ನಿವೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ನಿರೀಕ್ಷಿತವಾಗಿತ್ತು. ಆದರೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಹೊಸ ರಾಜಕೀಯ ಶಕ್ತಿ ಕ್ಷಿಪ್ರವಾಗಿ ಈ ಹೋರಾಟದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದು ಸರ್ಕಾರಕ್ಕೆ ಅನಿರೀಕ್ಷಿತ ಬೆಳವಣಿಗೆಯಾಗಿತ್ತು.
ಇದು ತನ್ನ ರಾಜಕೀಯ ಅಭಿಯಾನವನ್ನು ನೇರವಾಗಿ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಕೇಂದ್ರೀಕರಿಸಿತು. ಕೆಲವು ವಿಶ್ಲೇಷಕರ ಅಭಿಪ್ರಾಯದಲ್ಲಿ, ಸಿಜೆಪಿಯ ಉದಯವಾಗದೇ ಇದ್ದಿದ್ದರೆ ಮತ್ತು ಅದರ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಬೆಂಬಲ ದೊರಕದೇ ಇದ್ದಿದ್ದರೆ, ಧರ್ಮೇಂದ್ರ ಪ್ರಧಾನ್ ವಿರೋಧ ಪಕ್ಷಗಳ ಒತ್ತಡವನ್ನು ಎದುರಿಸಿ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇತ್ತು. ಆದರೆ ಸಿಜೆಪಿಯ ನಿರಂತರ ಹೋರಾಟ ಮತ್ತು ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಈ ವಿಷಯವನ್ನು ರಾಷ್ಟ್ರೀಯ ಮಟ್ಟದ ಚರ್ಚೆಯನ್ನಾಗಿ ಪರಿವರ್ತಿಸಿತು. ಪರಿಣಾಮವಾಗಿ ಸಂಪೂರ್ಣ ರಾಜಕೀಯ ಸಮೀಕರಣವೇ ಬದಲಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದೇ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕೆಂಬ ಸಂದೇಶ ನೀಡಿದ ಬಳಿಕ ಪ್ರಧಾನ್ ಅವರ ರಾಜಕೀಯ ಭವಿಷ್ಯ ಬಹುತೇಕ ನಿರ್ಧಾರಗೊಂಡಿತ್ತು ಎನ್ನುವ ವಿಶ್ಲೇಷಣೆಯೂ ಕೇಳಿಬರುತ್ತಿದೆ.
ಆದರೆ ಪ್ರಧಾನ್ ಸೋಲನ್ನು ಒಪ್ಪಿಕೊಂಡ ಸೇನಾನಿಯಂತೆ ನಿರ್ಗಮಿಸಲಿಲ್ಲ. ಬದಲಾಗಿ, ದೊಡ್ಡ ಉದ್ದೇಶಕ್ಕಾಗಿ ತ್ಯಾಗ ಮಾಡಿದ ನಾಯಕನ ಚಿತ್ರಣವನ್ನು ತಮ್ಮ ರಾಜೀನಾಮೆ ಪತ್ರದ ಮೂಲಕ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಎನ್ನುವುದು ಕೆಲವು ರಾಜಕೀಯ ವೀಕ್ಷಕರ ಅಭಿಪ್ರಾಯ.
ಅವರ ನಿರ್ಗಮನದಿಂದ ಪ್ರತಿಭಟನೆಯ ಪ್ರಮುಖ ಟಾರ್ಗೆಟ್‌ ಇಲ್ಲವಾಗಿದ್ದು, ಸರ್ಕಾರಕ್ಕೆ ಹೊಸ ರಾಜಕೀಯ ನಿರೂಪಣೆ ರೂಪಿಸಿಕೊಳ್ಳಲು ಅಗತ್ಯವಾದ ಸಮಯ ಮತ್ತು ಅವಕಾಶ ನೀಡಿದಂತಾಗಿದೆ.

ಪ್ರಮುಖ ಸುದ್ದಿ :-   "ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ" : ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಂತರ ಸೋನಂ ವಾಂಗ್ಚುಕ್ ಮೊದಲ ಪ್ರತಿಕ್ರಿಯೆ

ಆಡಳಿತ ವ್ಯವಸ್ಥೆಗೆ ‘ಎಕ್ಸಿಕ್ಯೂಟಿವ್ ಶೀಲ್ಡ್’?
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಂತಹ ಬೃಹತ್ ವ್ಯವಸ್ಥೆಯಲ್ಲಿ ವೈಫಲ್ಯ ಸಂಭವಿಸಿದಾಗ, ಅದರ ರಾಜಕೀಯ ಪರಿಣಾಮಗಳನ್ನು ನಿಯಂತ್ರಿಸಲು ಅಧಿಕಾರ ವ್ಯವಸ್ಥೆಯು ಸ್ಪಷ್ಟ ಗಡಿಯನ್ನು ರೂಪಿಸಬೇಕಾಗುತ್ತದೆ. ಅನೇಕ ವಿಶ್ಲೇಷಕರ ದೃಷ್ಟಿಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಇದೇ ರೀತಿಯ ‘ಸರ್ಕ್ಯೂಟ್ ಬ್ರೇಕರ್’ ಆಗಿ ಕಾರ್ಯನಿರ್ವಹಿಸಿದೆ.
ತಮ್ಮ ಪತ್ರದಲ್ಲಿ ಪ್ರಧಾನ್ ಪರೀಕ್ಷಾ ಮಾಫಿಯಾ, ಸಂಘಟಿತ ಅಕ್ರಮ ಜಾಲಗಳನ್ನು ಸಂಕಷ್ಟದ ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ ಸಿಬಿಐ ತನಿಖೆ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಹಾಗೂ ಕಂಪ್ಯೂಟರ್ ಆಧಾರಿತ ಪರೀಕ್ಷಾ ಮಾದರಿಯತ್ತ ಸಾಗುವ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.
ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವ ಮೂಲಕ ಅವರು ವಿವಾದದ ರಾಜಕೀಯ ಆಘಾತವನ್ನು ತಮ್ಮ ಮೇಲೆ ತೆಗೆದುಕೊಂಡಂತೆ ಕಾಣುತ್ತದೆ. ಇದರ ಪರಿಣಾಮವಾಗಿ ಕೇಂದ್ರ ಸಚಿವ ಸಂಪುಟ ಮತ್ತು ಪ್ರಧಾನಮಂತ್ರಿ ಕಚೇರಿಯ ಮೇಲಿನ ನೇರ ರಾಜಕೀಯ ಒತ್ತಡವೂ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಾಗಿದೆ.

ಒಡಿಶಾದ ದೀರ್ಘಾವಧಿಯ ರಾಜಕೀಯ ಲೆಕ್ಕಾಚಾರ..?
ಜುಲೈ 22ರಂದು ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲೇ ಧರ್ಮೇಂದ್ರ ಪ್ರಧಾನ್ ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಛಾಯಾಚಿತ್ರ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು. ಅಧಿಕೃತವಾಗಿ ಅದು ಒಡಿಶಾದ ಬಿಜೆಪಿ ಸಂಸದರೊಂದಿಗೆ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ನಡೆದ ಸಭೆಯ ಚಿತ್ರವಾಗಿತ್ತು. ಆದರೆ ಕೆಲವು ರಾಜಕೀಯ ವೀಕ್ಷಕರು ಅದನ್ನು ಒಡಿಶಾ ಬಿಜೆಪಿಯಲ್ಲಿ ಪ್ರಧಾನ್ ಅವರ ನಿರಂತರ ಪ್ರಭಾವದ ಸಂದೇಶವಾಗಿ ವ್ಯಾಖ್ಯಾನಿಸಿದರು.
ಅಷ್ಟೇ ಅಲ್ಲ, ತಮ್ಮ ರಾಜೀನಾಮೆ ಪತ್ರದ ಕೊನೆಯಲ್ಲಿ ಅವರು ಶ್ರೀ ಜಗನ್ನಾಥ ಮತ್ತು ಒಡಿಶಾವನ್ನು ವಿಶೇಷವಾಗಿ ಉಲ್ಲೇಖಿಸಿರುವುದು ಅವರ ಮುಂದಿನ ರಾಜಕೀಯ ಪಾತ್ರದ ಕುರಿತು ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಈ ಉಲ್ಲೇಖದ ರಾಜಕೀಯ ಅರ್ಥವನ್ನು ಅರ್ಥಮಾಡಿಕೊಳ್ಳಲು 2024ರ ಒಡಿಶಾ ವಿಧಾನಸಭಾ ಚುನಾವಣೆಯ ನಂತರದ ಬೆಳವಣಿಗೆಗಳನ್ನು ಗಮನಿಸಬೇಕು. 24 ವರ್ಷಗಳ ಕಾಲ ಆಡಳಿತ ನಡೆಸಿದ್ದ ನವೀನ್ ಪಟ್ನಾಯಕ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ‘ಒಡಿಯಾ ಅಸ್ಮಿತೆ’ ಹಾಗೂ ಸ್ಥಳೀಯ ನಾಯಕತ್ವದ ಪರಿಕಲ್ಪನೆಯನ್ನು ಪ್ರಮುಖವಾಗಿ ಬಳಸಿಕೊಂಡಿತ್ತು.
ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಗೆ ಪ್ರಮುಖ ಶಿಲ್ಪಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಸ್ವಾಭಾವಿಕವಾಗಿ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಬಿಜೆಪಿ ನಾಯಕತ್ವವು ನಾಲ್ಕು ಬಾರಿ ಶಾಸಕರಾಗಿದ್ದ ಮತ್ತು ಪ್ರಭಾವಿ ಆದಿವಾಸಿ ನಾಯಕ ಮೋಹನಚರಣ ಮಾಝಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು.
ಈ ನಿರ್ಧಾರವು ಆದಿವಾಸಿ ಮತದಾರರ ಬೆಂಬಲವನ್ನು ಬಲಪಡಿಸುವುದರ ಜೊತೆಗೆ ರಾಜ್ಯ ಮತ್ತು ಕೇಂದ್ರದ ನಡುವಿನ ಶಕ್ತಿ ಸಮತೋಲನವನ್ನು ಕಾಪಾಡುವ ಉದ್ದೇಶವನ್ನೂ ಹೊಂದಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.
ರಾಷ್ಟ್ರೀಯ ಮಟ್ಟದ ಪ್ರಭಾವಿ ನಾಯಕರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಅವರು ಸ್ವತಂತ್ರ ಪ್ರಾದೇಶಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಧಾನ್ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲೇ ಉಳಿಸುವ ಮೂಲಕ ಅವರ ರಾಷ್ಟ್ರೀಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದರ ಜೊತೆಗೆ ಪ್ರಾದೇಶಿಕ ಶಕ್ತಿಯ ಅತಿಯಾದ ಕೇಂದ್ರೀಕರಣವನ್ನು ತಪ್ಪಿಸಲಾಗಿತ್ತು.

ಪ್ರಮುಖ ಸುದ್ದಿ :-   ಪಾಟ್ನಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ; ಲಾಲುಪ್ರಸಾದ ಪುತ್ರ ತೇಜ್ ಪ್ರತಾಪ ಯಾದವ್ ಬಂಧನ

ಆದರೆ ಈಗ ಅವರ ರಾಜೀನಾಮೆಯೊಂದಿಗೆ ಒಡಿಶಾ ರಾಜಕೀಯದಲ್ಲಿ ಅವರಿಗೆ ದೊಡ್ಡ ಪಾತ್ರ ಸಿಗಬಹುದೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜಕೀಯ ನಾಯಕತ್ವದ ಮರುಹೊಂದಿಕೆ ಎಂಬುದು ಸಾಮಾನ್ಯವಾಗಿ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರದಲ್ಲಿ ಆದಿವಾಸಿ ಸಮುದಾಯದ ಪ್ರಮುಖ ಮುಖವಾಗಿರುವ ಮುಖ್ಯಮಂತ್ರಿ ಮೋಹನಚರಣ ಮಾಝಿ ಅವರನ್ನು ತಕ್ಷಣ ಬದಲಾಯಿಸುವುದು ರಾಜಕೀಯವಾಗಿ ಅಪಾಯಕಾರಿಯಾಗಬಹುದು.
ಆದಾಗ್ಯೂ, ಕೆಲ ವಿಶ್ಲೇಷಕರು ದೀರ್ಘಾವಧಿಯ ಸಾಧ್ಯತೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಅಸ್ಸಾಂನಲ್ಲಿ ಸರ್ಬಾನಂದ ಸೋನೋವಾಲ್ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಕರೆದು ಹಿಮಂತ ಬಿಸ್ವ ಶರ್ಮ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ ಮಾದರಿಯಂತೆಯೇ, ಭವಿಷ್ಯದಲ್ಲಿ ಮೋಹನಚರಣ ಮಾಝಿ ಅವರಿಗೆ ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿ ನೀಡಿ ಒಡಿಶಾದಲ್ಲಿ ಹೊಸ ನಾಯಕತ್ವ ಸಮೀಕರಣ ರೂಪಿಸುವ ಸಾಧ್ಯತೆಯನ್ನು ಕೆಲವರು ತಳ್ಳಿಹಾಕುತ್ತಿಲ್ಲ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಸಾಧ್ಯತೆ ಕಡಿಮೆ ಎನ್ನುವುದು ರಾಜಕೀಯ ವಲಯದ ಸಾಮಾನ್ಯ ಅಭಿಪ್ರಾಯ. ಹೊಸದಾಗಿ ಗೆದ್ದ ರಾಜ್ಯದಲ್ಲಿ ಮಧ್ಯಾವಧಿಯಲ್ಲೇ ನಾಯಕತ್ವ ಬದಲಾವಣೆ ಮಾಡಿದರೆ ಅದು ಪಕ್ಷದೊಳಗಿನ ಅಸ್ಥಿರತೆಯ ಸಂದೇಶ ನೀಡುವ ಅಪಾಯವಿದೆ.
ಆದರೂ, ನೈತಿಕ ಹೊಣೆಗಾರಿಕೆಯ ನೆಲೆಯಲ್ಲಿ ರಾಜೀನಾಮೆ ನೀಡಿರುವುದು ಮತ್ತು ಅವರ ವಿರುದ್ಧ ಯಾವುದೇ ವೈಯಕ್ತಿಕ ಆರೋಪಗಳು ಇಲ್ಲದಿರುವುದು ಮಹ್ತವದ ಅಶವೇ ಆಗಿದೆ. ಹೀಗಾಗಿ ಈ ರಾಜೀನಾಮೆ ಒಂದು ರಾಜಕೀಯ ಅಂತ್ಯವಲ್ಲ; ಭವಿಷ್ಯದ ಇನ್ನಷ್ಟು ದೊಡ್ಡ ಪಾತ್ರದ ಮುನ್ನುಡಿಯಾಗಿರಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement