ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ಮೇಲಿನ ಸುಳ್ಳು ಕೇಸ್ ವಾಪಸ್ ಪಡೆಯುತ್ತೇವೆ: ಸಚಿವ ಈಶ್ವರಪ್ಪ

ಬೆಳಗಾವಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ’ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮವರ ಮೇಲೆ ಹಲವೆಡೆ ಸುಳ್ಳು ಪ್ರಕರಣಗಳನ್ನು ಹಾಕಲಾಗಿಕಿದೆ. ಈಗ ನಮಗೂ ಶಕ್ತಿ ಇದೆ. ವಾಪಸ್ ಪಡೆಯುತ್ತೇವೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗೆಯುತ್ತಾರೆ, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸುತ್ತಾರೆ ಎಂದೆಲ್ಲಾ ಕಾಂಗ್ರೆಸ್‌ನವರು ಸುದ್ದಿ ಹಬ್ಬಿಸಿದ್ದರು. ಎಷ್ಟು ಜನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು? ಮೀಸಲಾತಿ ಕಿತ್ತುಕೊಂಡಿದ್ದೇವೆಯೇ? ವೈದ್ಯಕೀಯ ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟಿದ್ದೇವೆ. ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ಸಿಕ್ಕಿದೆ’ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದಾಗ ದಲಿತ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು. ಪುಕ್ಸಟ್ಟೆ ಹೇಳೋಕೇನು? ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಎಷ್ಟು ಜನ ದಲಿತರನ್ನು ಮುಖ್ಯಮಂತ್ರಿ ಮಾಡಿದರು? ನಾವು ಈಗ ಕಣ್ಣು ಬಿಡುತ್ತಿದ್ದೇವೆ. ನಮಗೆ ಪೂರ್ಣ ಬಹುಮತವನ್ನು ಜನರು ಕೊಟ್ಟಿಲ್ಲ. ಅವರಿವರನ್ನು ತಗೊಂಡು ಸರ್ಕಾರ ರಚಿಸಿದ್ದೇವೆ. ಅವಕಾಶ ಬಂದಾಗ ದಲಿತ ಮುಖ್ಯಮಂತ್ರಿ ಮಾಡುತ್ತೇವೆ’ ಎಂದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement