ಸಾವರ್ಕರ ಕುರಿತ ಮಾನಹಾನಿ ಹೇಳಿಕೆ: ಮೇ 9ರಂದು ರಾಹುಲ್‌ ಗಾಂಧಿ ಹಾಜರಿಗೆ ಸೂಚಿಸಿದ ಪುಣೆ ನ್ಯಾಯಾಲಯ

ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾವರ್ಕರ ಅವರ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಕುರಿತಾಗಿ ಅರ್ಜಿ ದಾಖಲಿಸಲು ಮೇ 9 ರಂದು ಹಾಜರಾಗುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪುಣೆಯ ಜನಪ್ರತಿನಿಧಿಗಳ ನ್ಯಾಯಾಲಯವು ಸೂಚಿಸಿದೆ.
ಈ ಮೊದಲು ಸಂಕ್ಷಿಪ್ತ ವಿಚಾರಣೆ (ಸಮ್ಮರಿ ಟ್ರಯಲ್‌) ನಡೆಸುವ ಕಾರಣಕ್ಕೆ ರಾಹುಲ್‌ ಗಾಂಧಿ ಅವರಿಗೆ ವಿಚಾರಣೆ ವೇಳೆ ವೈಯಕ್ತಿಕ ಹಾಜರಾತಿಗೆ ಶಾಶ್ವತ ವಿನಾಯಿತಿ ನೀಡಲಾಗಿತ್ತು. ಆದರೆ, ಪ್ರಕರಣದ ವಿಚಾರಣೆಯನ್ನು ಸಂಕ್ಷಿಪ್ತ ವಿಚಾರಣೆಯನ್ನಾಗಿಸದೆ ತಮ್ಮ ಹೇಳಿಕೆಗಳನ್ನು ದಾಖಲಿಸಲು ಅಗತ್ಯವಾದ ಪುರಾವೆ ಒದಗಿಸಲು ರಾಹುಲ್‌ ಗಾಂಧಿ ಅವರು ಅನುಮತಿ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯ ಸ್ವರೂಪವನ್ನು ಸಮನ್ಸ್ ವಿಚಾರಣೆಗೆ ಬದಲಾಯಿಸಲಾಯಿತು.

ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ನಡೆದ ಭಾಷಣದ ಸಮಯದಲ್ಲಿ ರಾಹುಲ್‌ ಅವರು ವಿನಾಯಕ ಸಾವರ್ಕರ ಬಗ್ಗೆ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ ಸಲ್ಲಿಸಿದ ದೂರಿಗೆ ಈ ವಿಚಾರಣೆ ಸಂಬಂಧಿಸಿದೆ.
ಸಾವರ್ಕರ ತಮ್ಮ ಬರಹವೊಂದರಲ್ಲಿ ತಾನು ಮತ್ತು ತನ್ನ ಗುಂಪು ಒಮ್ಮೆ ಮುಸ್ಲಿಮರನ್ನು ಥಳಿಸಿದ್ದಾಗಿಯೂ ಅದರಿಂದ ತಮಗೆ ಆನಂದ ದೊರೆತದ್ದಾಗಿಯೂ ಬರೆದುಕೊಂಡಿದ್ದಾರೆ ಎಂದು ರಾಹುಲ್‌ ತಮ್ಮ ಭಾಷಣದ ವೇಳೆ ಪ್ರಸ್ತಾಪಿಸಿದ್ದರು. ಈ ಹೇಳಿಕೆಗಳನ್ನು ನಿರಾಕರಿಸಿದ್ದ ಸಾತ್ಯಕಿ ಅವರು ರಾಹುಲ್ ಅವರ ಟೀಕೆಗಳು ಮಾನಹಾನಿಕರ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

ರಾಹುಲ್‌ ಗಾಂಧಿ ಅವರು ಮಾಡಿರುವ ಕ್ರಿಮಿನಲ್ ಮಾನಹಾನಿಗಾಗಿ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಗರಿಷ್ಠ ಶಿಕ್ಷೆ ಮತ್ತು ಸಿಆರ್‌ಪಿಸಿ ಸೆಕ್ಷನ್ 357ರ ಅಡಿ ಅತ್ಯಧಿಕ ಪರಿಹಾರ ನೀಡುವಂತೆ ಸಾತ್ಯಕಿ ಕೋರಿದ್ದರು.
ಮುಂದಿನ ವಿಚಾರಣೆ ವೇಳೆಗೆ ರಾಹುಲ್‌ ತಮ್ಮ ವಾದಗಳನ್ನು ಔಪಚಾರಿಕವಾಗಿ ದಾಖಲಿಸಲು ಹಾಜರಿರುವಂತೆ ನ್ಯಾಯಾಲಯವು ನಿರ್ದೇಶಿಸಿದೆ. ರಾಹುಲ್‌ ಗಾಂಧಿಯವರ ಪರವಾಗಿ ವಕೀಲ ಮಿಲಿಂದ್ ಪವಾರ್ ವಾದಿಸಿದರು. ಸಾತ್ಯಕಿ ಸಾವರ್ಕರ್ ಅವರನ್ನು ವಕೀಲ ಸಂಗ್ರಾಮ್ ಕೊಲ್ಹತ್ಕರ್ ಪ್ರತಿನಿಧಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement